ನವದೆಹಲಿ, ಅ.11 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಬಾಹ್ಯಾಕಾಶ ಕ್ಷೇತ್ರದ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಪ್ರಧಾನ ಮಂತ್ರಿಗಳ ಕಚೇರಿ, "ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಪ್ರತಿಧ್ವನಿಸು ಐ.ಎಸ್.ಪಿ.ಎ. ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿದ ಹಾಗೂ ಬಾಹ್ಯಾಕಾಶ ರಂಗದಲ್ಲಿ ಪ್ರಮುಖ ಪ್ಲೇಯರ್ ಆಗಿ ಮಾಡಲು ಸಹಾಯ ಮಾಡುತ್ತದೆ" ಎಂದು ತಿಳಿಸಿದೆ.
ಸೋಮವಾರ ಐಎಸ್ಪಿಎ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವಟು ಟ್ವೀಟ್ ಮೂಲಕ ತಿಳಿಸಿದ್ದು, "ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ನಾನು ಭಾರತೀಯ ಬಾಹ್ಯಾಕಾಶ ಅಸೋಸಿಯೇಷನ್ ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಈ ಸಂದರ್ಭ ಕ್ಷೇತ್ರದ ಪ್ರಮುಖ ಪಾಲುದಾರರ ಜೊತೆಗೆ ಸಂವಹನ ನಡೆಸಲು ಸಿಕ್ಕಿದ್ದು ನನಗೆ ಸಂತೋಷವಾಗಿದೆ. ಬಾಹ್ಯಾಕಾಶ ಹಾಗೂ ನಾವೀನ್ಯತೆಯ ಜಗತ್ತಿನಲ್ಲಿ ಆಸಕ್ತಿ ಇದ್ದವರು ನಾಳಿನ ಕಾರ್ಯಕ್ರಮವನ್ನು ವೀಕ್ಷಿಸಬೇಕು" ಎಂದಿದ್ದರು.
"ಐಎಸ್ಪಿಎ ಭಾರತೀಯ ಬಾಹ್ಯಾಕಾಶ ಉದ್ಯಮದ ಸಾಮೂಹಿಕ ಧ್ವನಿಯಾಗಲು ಬಯಸುವ ಬಾಹ್ಯಾಕಾಶ ಹಾಗೂ ಉಪಗ್ರಹ ಕಂಪೆನಿಗಳ ಪ್ರಮುಖ ಉದ್ಯಮ ಸಂಘವಾಗಿದೆ" ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.