ಬೆಂಗಳೂರು, ಅ 11 (DaijiworldNews/MS): ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಉಳಿಯಲು ಬಯಸುತ್ತಾರೆ ಮತ್ತು ಮದುವೆಯ ನಂತರವೂ ಅವರು ಮಕ್ಕಳಿಗೆ ಜನ್ಮ ನೀಡಲು ಬಯಸುವುದಿಲ್ಲ. ಬಾಡಿಗೆ ತಾಯ್ತನವನ್ನು ಆರಿಸಿಕೊಳ್ಳುತ್ತಿದ್ದಾರೆ" ಎಂದು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಭಾನುವಾರ ವಿದಾತ್ಮಕ ಹೇಳಿಕೆಯ ಸುಳಿಯಲ್ಲಿ ಸಿಲುಕಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಈ ಮೇಲಿನ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಚಿವರು ಹೇಳಿದ ಸಾಮಾನ್ಯೀಕೃತ ಹೇಳಿಕೆಯನ್ನು ಮಹಿಳಾ ಸಂಘಟನೆಗಳು ಖಂಡಿಸಿದ್ದ, ಮಹಿಳೆಯರು ಮಗುವನ್ನು ಹೊಂದಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮಹಿಳೆಯರಿಗೆ ಸ್ವಾತಂತ್ರ್ಯವಿದೆ ಎಂದು ಒತ್ತಿ ಹೇಳಿದ್ದಾರೆ
ಸಮಾರಂಭದಲ್ಲಿ ಮಾತನಾಡಿರುವ ಸಚಿವ ಡಾ|ಕೆ. ಸುಧಾಕರ್, "ಇಂದು, ನಾನು ಇದನ್ನು ಹೇಳಲು ವಿಷಾದಿಸುತ್ತೇನೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿ ಉಳಿಯಲು ಬಯಸುತ್ತಾರೆ. ಅವರು ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡಲು ಬಯಸುತ್ತಿಲ್ಲ. ಅವರು ಬಾಡಿಗೆ ತಾಯ್ತನವನ್ನು ಬಯಸುತ್ತಾರೆ. ಆದ್ದರಿಂದ ನಮ್ಮ ಆಲೋಚನೆಯಲ್ಲಿ ಒಂದು ಮಾದರಿ ಬದಲಾವಣೆಯಿದೆ, ಇದು ಒಳ್ಳೆಯದಲ್ಲ. ಅಲ್ಲದೆ, ಭಾರತೀಯ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವವೂ ಮಹಿಳೆಯರ ಈ ಮನಸ್ಥಿತಿಗೆ ಕಾರಣವಾಗಿದೆ. ಪರಿಣಾಮ ಜನರು ತಮ್ಮ ಹೆತ್ತವರನ್ನು ಸಹ ತಮ್ಮೊಂದಿಗೆ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ" ಎಂದು ಹೇಳಿದ್ದಾರೆ.
"ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ಹೋಗುತ್ತಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಬದುಕುವುದನ್ನು ನಾವು ಬಯಸುವುದಿಲ್ಲ. ಅಜ್ಜಿಯರು ನಮ್ಮೊಂದಿಗೆ ಇರುವುದನ್ನು ಇಂದಿನ ಪೀಳಿಗೆ ಇಷ್ಟಪಡುತ್ತಿಲ್ಲ" ಎಂದು ಸಚಿವ ಸುಧಾಕರ್ ವಿಷಾಧ ವ್ಯಕ್ತಪಡಿಸಿದ್ದರು.