ಬೆಂಗಳೂರು, ಅ.10 (DaijiworlNews/HR): 'ಸಿದ್ದಕಲೆ'ಯ ನಿಷ್ಣಾತರಿಗೆ ಹೊಸ ಕನಸು ಬಿದ್ದ ಹಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವ್ಹೀಕ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಗಲು ಕನಸು ಕಾಣುವವರಿಗೆ ನನ್ನ ಅನುಕಂಪವಿದೆ. ಜೆಡಿಎಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಮತ್ತೆ ಮತ್ತೆ ಅವರು ಅದೇ ಜಪ ಮಾಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜೆಡಿಎಸ್ ಬಗ್ಗೆ ಮಾತನಾಡಲ್ಲ ಅಂತೀರಿ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಅನ್ನುತ್ತೀರಿ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ ಎಂದು ಗೋಳಾಡುತ್ತೀರಿ. ಮತ್ಯಾಕೆ ನಮ್ಮ ಬಗ್ಗೆ ಮಾತು? ಬಿಜೆಪಿಯವರು ನಿಮ್ಮ ಹೇಳಿಕೆಗಳಿಗೆ ಕ್ಯಾರೇ ಅನ್ನುವುದಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ನಿಮಗೆ ಗತಿಯೇ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಕುಮಾರಸ್ವಾಮಿಯವರ ಟೀಕೆಗಳನ್ನು ನೆಗ್ಲೆಕ್ಟ್ ಮಾಡ್ತೀನಿ ಅನ್ನುತ್ತಲೇ ಕುಮಾರಸ್ವಾಮಿ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತೀರಿ ಸಿದ್ದರಾಮಯ್ಯನವರೇ? ನಿಮ್ಮ ರಾಜಕೀಯ ಉಳಿಗಾಲಕ್ಕಾಗಿ ನನ್ನನ್ನು, ದೇವೇಗೌಡರನ್ನು ಟೀಕೆ ಮಾಡುವುದು ನಿಮಗೆ ಅನಿವಾರ್ಯ. ಅದು ತಪ್ಪಿದರೆ ನಿಮಗೆ ಬೇರೆ ವಿಧಿ ಇಲ್ಲ. ಕಾಂಗ್ರೆಸ್ನಲ್ಲಿ ನಿಮಗೆ ಮೂರು ಕಾಸಿನ ಬೆಲೆ ಇಲ್ಲ" ಎಂದು ಹೇಳಿದ್ದಾರೆ.