ಬೆಂಗಳೂರು, ಅ.10 (DaijiworldNews/PY): ಮುಂದಿನ ಚುನಾವಣೆಯೊಳಗೆ ಬಿಎಸ್ವೈ ಅವರನ್ನ ಸಂಪೂರ್ಣ ಮುಗಿಸುವ "ಟಾರ್ಗೆಟ್ ಬಿಎಸ್ವೈ" ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ ಬಿಎಸ್ವೈ ಅವರನ್ನ ಸಂಪೂರ್ಣ ಮುಗಿಸುವ "ಟಾರ್ಗೆಟ್ ಬಿಎಸ್ವೈ" ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷ ಕಟ್ಟಿದವರನ್ನ ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್! ಎಂದು ಟೀಕಿಸಿದೆ.
"ನೀರಾವರಿ ಇಲಾಖೆಯ 20,000 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಿ ವೈ ವಿಜಯೇಂದ್ರ ಹಾಗೂ ಬಿಎಸ್ವೈ ಅವರ ಆಪ್ತರನ್ನೇ ಗುರಿಯಾಗಿಸಿ ಐಟಿ ದಾಳಿಯಾಗಿದೆ. ಸರ್ಕಾರದ ಭ್ರಷ್ಟಾಚಾರವನ್ನ, ವಿಜಯೇಂದ್ರ ಹಸ್ತಕ್ಷೇಪವನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ, ಅಥವಾ ಬಿಎಸ್ವೈ ಅವರನ್ನು ಮುಗಿಸುವ ತಂತ್ರವೆನ್ನುತ್ತದೆಯೇ. ಬಿಜೆಪಿ ಉತ್ತರಿಸಬೇಕು" ಎಂದಿದೆ.
"ತಿಂಗಳಿಗೊಮ್ಮೆ ಸಿಎಂ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಬರಿಗೈಯಲ್ಲಿ ವಾಪಸಾಗುತ್ತಾರೆ! ಜಿಎಸ್ಟಿ ಬಾಕಿ, ನೆರೆ ಪರಿಹಾರ ತರುವ ಬದಲು ಸಾಲದ ಭರವಸೆಯನ್ನು ಮಾತ್ರ ತರುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ತಾವು ದೆಹಲಿ ಪ್ರವಾಸ ಕೈಗೊಳ್ಳುವುದು ನಿಮ್ಮ ಪಕ್ಷದ ಹಿತಕ್ಕಾಗಿಯೋ, ರಾಜ್ಯದ ಹಿತಕ್ಕಾಗಿಯೋ ಅಥವಾ ನಿಮ್ಮ ಹಿತಕ್ಕಾಗಿಯೋ?" ಎಂದು ಪ್ರಶ್ನಿಸಿದೆ.