ಮಂಡ್ಯ, ಅ.10 (DaijiworldNews/PY): "ನಾನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಕುರಿತು ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಆದರೂ ಅವರು ನನ್ನು ವಿರುದ್ದ ಆರೋಪ ಮಾಡುತ್ತಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ ಎಂದ ಹೆಚ್ಡಿಕೆ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ಕುರಿತು ಮಾತನಾಡುವುದನ್ನು ನಾನು ನಿಲ್ಲಿಸಿದ್ದೇನೆ. ಆದರೂ, ಕುಮಾರಸ್ವಾಮಿ ಅವರೇ ಕಾಲು ಕೆರೆದುಕೊಂಡು ಬರುತ್ತಿದ್ದಾರೆ. ನಾನೇನು ಮಾಡಲಿ?. ನಾನು ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಿರ್ಲಕ್ಷ ಮಾಡಿದ್ದೇನೆ. ಅವರು ಟೀಕೆ ಮಾಡಿದರೆ ಮಾಡಲಿ" ಎಂದಿದ್ದಾರೆ.
"ಮಂಡ್ಯದಲ್ಲಿ ಜೆಡಿಎಸ್ ವೀಕ್ ಆಗಿದೆ. ಜೆಡಿಎಸ್ ಬಲಿಷ್ಟವಾಗಿದ್ದರೆ ಲೋಕಸಭೆ ಚುನಾವಣೆಯಲ್ಲಿ ಏಕೆ ಸೋತರು?. ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರು ಇದ್ದರೂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಆಗಲಿಲ್ಲ" ಎನ್ನುವ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
"ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ. ಈಗ ನೋಡಿದರೇ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೆ ನಿಂದಿಸುತ್ತಿದ್ದಾರೆ" ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದರು.
"ಬುದ್ಧಿವಂತ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಸಿದ್ಧಹಸ್ತರು ಫರ್ಮಾನು ಹೊರಡಿಸಿದ್ದಾರೆ. ಜನರು ಇವರ ಜೇಬಿನಲ್ಲಿ ಇದ್ದಾರಾ? ಇದು ಸಿಂದಗಿ ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ. ಅವರೇ ತಕ್ಕ ಉತ್ತರ ನೀಡಲಿದ್ದಾರೆ" ಎಂದು ತಿಳಿಸಿದ್ದರು.
"ಈಗ ಎಂಸಿ ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ, ಜನರಿಗೆ ತಮ್ಮ ಸಿದ್ದಕಲೆ ದರ್ಶನ ಆಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ" ಎಂದು ಹೇಳಿದ್ದರು.