ರಾಜಸ್ಥಾನ, ಅ.10 (DaijiworlNews/HR): ಅನ್ಯಜಾತಿ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಯುವಕನೊಬ್ಬನನ್ನು ಯುವತಿ ಮನೆಯವರು ಹುಡುಕಿ, ಎಳೆದುಕೊಂಡು ಹೋಗಿ ಮನಸೋ ಇಚ್ಛೆ ದೊಣ್ಣೆಯಿಂದ ಬಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಹನುಮನ್ಗರ್ನಲ್ಲಿ ನಡೆದಿದೆ.
ದಲಿತ ಯುವಕನೊಬ್ಬ ಅನ್ಯಜಾತಿ ಯುವತಿಯನ್ನ ಪ್ರೀತಿಸುತ್ತಿದ್ದು, ಆತ ಗ್ರಾಮದಿಂದ ಇದಕ್ಕಿದ್ದಂತೆ ಕಣ್ಮರೆಯಾಗಿದ್ದ. ಇದಾದ ಕೆಲ ಹೊತ್ತಿನ ಬಳಿಕ ಆತನ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಇದನ್ನ ಕಂಡು ಆಘಾತಕ್ಕೆ ಒಳಗಾಗಿದ್ದರು.
ಇನ್ನು ತನ್ನ ಮಗ ಯಾಕೆ ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಆದರೆ ದಲಿತ ಯುವಕನಿಗೆ ಯುವಕರ ಗುಂಪೊಂದು ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಬಳಿಕವಷ್ಟೇ ತಮ್ಮ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೋಷಕರಿಗೆ ತಿಳಿದಿದೆ.
ಯುವಕನ ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ನಾಲ್ವರನ್ನ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.