ಬೆಂಗಳೂರು, ಅ.10 (DaijiworldNews/PY): "ನಾನು ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಟವೆಲ್ ಹಾಕಿಲ್ಲ" ಎಂದು ಆರ್ ಅಶೋಕ್ ತಿಳಿಸಿದ್ದಾರೆ.
"ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ತಮಗೆ ಬಿಟ್ಟುಕೊಡುವಂತೆ ಸಚಿವ ಎಂ ಟಿ ಬಿ ನಾಗರಾಜ್ ಕೇಳಿದರು. ನಾನು ಕೂಡಲೇ ಅವರ ಕೋರಿಕೆಯನ್ನು ಒಪ್ಪಿಕೊಂಡೆ. ಯಾವುದೇ ಜಿಲ್ಲೆಯ ಉಸ್ತುವಾರಿ ಇಲ್ಲದೆಯೂ ನಾನು ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ.
"ನಾನು ನನ್ನ ಇಲಾಖೆಯನ್ನು ಬಿಟ್ಟು ಬೇರೆ ಇಲಾಖೆಗಳ ಕೆಲಸಕ್ಕೆ ತಲೆಹಾಕಲು ಹೋಗುವುದಿಲ್ಲ. ಬೆಂಗಳೂರಿನಲ್ಲಿ ರಸ್ತೆಗಳ ಗುಂಡಿ ಮುಚ್ಚಿಲು ಹೇಳಿದ್ದು, ಅದನ್ನಷ್ಟೇ ನಾನು ಮಾಡಿದ್ದೇನೆ" ಎಂದಿದ್ದಾರೆ.
"ಯಾವುದೇ ಜಿಲ್ಲೆಯ ಉಸ್ತುವಾರಿ ನೀಡುವಂತೆ ನಾನು ಬೇಡಿಕೆ ಇಟ್ಟಿಲ್ಲ. ರಾಜ್ಯದ 31 ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಸಿಎಂ ಅವರ ಪರಮಾಧಿಕಾರ. ಸಿಎಂ ಅವರ ತೀರ್ಮಾನಕ್ಕೆ ನಾವು ಬದ್ಧ" ಎಂದು ಹೇಳಿದ್ದಾರೆ.
"ಸೋಮಣ್ಣ ಸರಿಯಾಗಿ ಹೇಳಿದ್ದಾರೆ. ನಮ್ಮ ಮಧ್ಯೆ ಯಾವುದೇ ರೀತಿಯಾದ ಸಮಸ್ಯೆ ಇಲ್ಲ. ಪೂರ್ವನಿಗದಿತ ಕಾರ್ಯಕ್ರಮ ಅಥವಾ ಪ್ರವಾಸದಲ್ಲಿದ್ದ ಸಂದರ್ಭ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಉಳಿದಂತೆ ಶಾಸಕರೇ ಸಭೆ ಕರೆದರೂ ಕೂಡಾ ನಾನು ಹೋಗುತ್ತೇನೆ" ಎಂದು ತಿಳಿಸಿದ್ದಾರೆ.