ಬೆಂಗಳೂರು, ಅ.10 (DaijiworldNews/PY): "ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಕಲ್ಲಿದ್ದಲು ಕೊರತೆ ನೀಗಿಸಲು ಮನವಿ ಮಾಡಲಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಡೀ ಭಾರತ ದೇಶವನ್ನು ಕಲ್ಲಿದ್ದಲಿನ ಕೊರತೆ ಬಾಧಿಸುತ್ತಿದೆ. ಕರ್ನಾಟಕದಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಮಾಡಲಾಗಿದೆ. ಪ್ರಸ್ತುತ ರಾಜ್ಯಕ್ಕೆ ಸರಬರಾಜು ಆಗುತ್ತಿರುವ 10 ರೇಕ್ ಕಲ್ಲಿದ್ದಲನ್ನು ಹಚ್ಚಿಸಿ 14 ರೇಕ್ ಸರಬರಾಜು ಮಾಡಲು ಒಪ್ಪಿಗೆ ನೀಡಿದ್ದಾರೆ" ಎಂದಿದ್ದಾರೆ.
"ಕೇಂದ್ರ ಆರೋಗ್ಯ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ, ರಬಿ ಹಂಗಾಮಿಗೆ ಹೆಚ್ಚಿನ ಡಿಎಪಿ ಹಾಗೂ ಎಂಒಪಿ ಒದಗಿಸಲು ಮನವಿ ಮಾಡಲಾಗಿದ್ದು. ಇದನ್ನು ಒಂದು ವಾರದೊಳಗೆ ಒದಗಿಸಲಾಗುವುದು" ಎಂದು ಹೇಳಿದ್ದಾರೆ.
"ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಮೊದಲನೇ ಡೋಸ್ ಶೇ.90ರಷ್ಟು ಹಾಗೂ ಎರಡನೇ ಡೋಸ್ ಶೇ.70ರಷ್ಟು ಕೊಡುವ ಗುರಿಗೆ ಕೇಂದ್ರ ಆರೋಗ್ಯ ಸಚಿವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ" ಎಂದಿದ್ದಾರೆ.