ಬೆಂಗಳೂರು, ಅ.10 (DaijiworldNews/PY): "ಬಿ ಎಸ್ ಯಡಿಯೂರಪ್ಪ ಅವರ ಅಡಳಿತ ಆಂತರಿಕ ಕಿತ್ತಾಟದಲ್ಲಿಯೇ ಕಳೆದಿದ್ದಾಯ್ತು, ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತವೂ ಲೂಟಿಗಾಗಿ ಪೈಪೋಟಿಯಲ್ಲಿಯೇ ಕಳೆಯಲಿದೆ" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿ ಎಸ್ ಯಡಿಯೂರಪ್ಪ ಅವರ ಅಡಳಿತ ಆಂತರಿಕ ಕಿತ್ತಾಟದಲ್ಲಿಯೇ ಕಳೆದಿದ್ದಾಯ್ತು, ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತವೂ ಲೂಟಿಗಾಗಿ ಪೈಪೋಟಿಯಲ್ಲಿಯೇ ಕಳೆಯಲಿದೆ. ಬಿಜೆಪಿ ಆಡಳಿತವೆಂದರೆ ರಾಜ್ಯಕ್ಕೆ ಶಾಪ ತಗುಲಿದಂತೆ. ಸರ್ಕಾರದ ಸಮಸ್ಯೆಗಳೇ ಮುಗುಯುವುದಿಲ್ಲ, ಜನರ ಸಮಸ್ಯೆಗಳನ್ನು ಗಮನಿಸುವುದು ದೂರದ ಮಾತು" ಎಂದಿದೆ.
"ಬಿಜೆಪಿ ಶಾಸಕರು ಆರ್ ಅಶೋಕ್ ಅವರ ವಿರುದ್ಧ ಮುಗಿಬಿದ್ದಿದ್ದಾರೆ, ಡಕೋಟಾ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದು ಸ್ಪಷ್ಟ. ಅಶೋಕ್ ಬೆಂಗಳೂರಿನ ಭ್ರಷ್ಟಾಚಾರದ ಸಾಮ್ರಾಜ್ಯಕ್ಕೆ ನಾನೊಬ್ಬನೇ ಸಾಮ್ರಾಟ ಎನ್ನುತ್ತಿದ್ದಾರೆ, ಶಾಸಕರು 'ನಾವೂ ಇದ್ದೇವೆ ಹಂಚಿ ತಿನ್ನೋಣ' ಎನ್ನುತ್ತಿದ್ದಾರೆ! ಈ ಸರ್ಕಾರದಲ್ಲಿ ಬಿಜೆಪಿ vs ಬಿಜೆಪಿ ಕದನ ಮುಗಿಯದ ಕತೆ!" ಎಂದು ಟೀಕಿಸಿದೆ.
"ಬಿಜೆಪಿ ಎಂದಿಗೂ ತನ್ನ ಬಿಜೆಪಿ vs ಬಿಜೆಪಿ ಕಚ್ಚಾಟ ನಿಲ್ಲಿಸದು, ಸಮರ್ಪಕ ಆಡಳಿತ ನೀಡದು. ನಾಯಕತ್ವ ಬದಲಾವಣೆಯ ಕಿತ್ತಾಟದ ನಂತರ ಮಂತ್ರಿಗಿರಿಗಾಗಿ ಕಚ್ಚಾಟ, ಖಾತೆಗಾಗಿ ಕಾದಾಟ, ಈಗ ಉಸ್ತುವಾರಿಗಾಗಿ ಕಿತ್ತಾಟ. ಈ ಪೈಪೋಟಿ ಲೂಟಿಗಾಗಿ ಹೊರತು, ಅಭಿವೃದ್ಧಿಗಾಗಿ ಅಲ್ಲ. ಸಕ್ಕರೆ ಇರುವಲ್ಲಿ ಇರುವೆ ಮುತ್ತಿದಂತೆ ಹಣ ಇರುವೆಡೆ ಬಿಜೆಪಿಗರು ಮುಗಿಬೀಳುತ್ತಾರೆ!" ಎಂದು ಹೇಳಿದೆ.