ಚಿಕ್ಕಮಗಳೂರು, ಅ.10 (DaijiworldNews/PY): "ಆರ್ಎಸ್ಎಸ್ ಆನೆ ಇದ್ದಂತೆ. ಬೇರೆಯವರು ಏನು ಮಾಡುತ್ತಾರೆ ಎನ್ನುವ ಬಗ್ಗೆ ಆನೆ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಆರ್ಎಸ್ಎಸ್ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಸಂಘದಲ್ಲಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವ ಪದ್ಧತಿ ಇಲ್ಲ. ಸತ್ಯದ ಅರಿವಿದ್ದಲ್ಲಿ ಆರ್ಎಸ್ಎಸ್ ಬಗ್ಗೆ ಅರ್ಥವಾಗುತ್ತದೆ. ತಾನು ಬದುಕಿರುವ ತನಕ ಓಟು ಬಂದರೆ ಸಾಕು ಅನ್ನುವ ಮನೋಭಾವ ಇರುವವರಿಗೆ ಹಾಗೂ ಸ್ವಾರ್ಥದಲ್ಲಿ ಯೋಚಿಸುವವರಿಗೆ ಅರ್ಥವಾಗುವುದಿಲ್ಲ. ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವ ನೀಡುವವರಿಗೆ ಆರ್ಎಸ್ಎಸ್ ಅರ್ಥವಾಗುತ್ತದೆ" ಎಂದಿದ್ದಾರೆ.
"ಯಾರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು ಎನ್ನುವುದು ಸಿಎಂ ಅವರ ತೀರ್ಮಾನಕ್ಕೆ ಬಿಟ್ಟಿದ್ದು. ಅವರು ಆಯಾ ಜಿಲ್ಲೆಯ ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರಕ್ಕೆ ನಾನು ತಲೆ ಹಾಕಲ್ಲ" ಎಂದು ಹೇಳಿದ್ದಾರೆ.