ಕಾಶ್ಮೀರ, ಅ.10 (DaijiworldNews/PY): "ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಮಂಜ್ಗಾಮ್ ಪ್ರದೇಶದಲ್ಲಿ ಶಂಕಿತ ಉಗ್ರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ" ಎಂದು ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಶನಿವಾರ ಬೆಳಗ್ಗೆ ಶ್ರೀನಗರದ ಮೆಥಾನ್ನಲ್ಲಿ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಮತ್ತೊಂದು ಎನ್ಕೌಂಟರ್ ನಡೆದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಶ್ರೀನಗರದ ಮೆಥಾನ್ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಗಿದೆ. ಪೊಲೀಸರು ಹಾಗೂ ಸಿಆರ್ಪಿಎಫ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶವನ್ನು ಸುತ್ತುವರಿದಿದ್ದು, ಖಚಿತ ಆಧಾರದ ಮೇಲೆ ಶೋಧ ಕಾರ್ಯಾಚರಣೆ ಆರಂಭಿಸಿದ ಬಳಿಕ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆಯಿತು" ಎಂದು ತಿಳಿಸಿದ್ದಾರೆ.
ಭಯೋತ್ಪಾದಕರು ಅಡಗಿದ್ದ ಸ್ಥಳದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.