ಗುವಾಹಟಿ, ಅ.10 (DaijiworldNews/PY): "ಮಣಿಪುರದಲ್ಲಿ 2022ರಲ್ಲಿಯೂ ಬಿಜೆಪಿ ಸರ್ಕಾರ ರಚಿಸಲಿದೆ" ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.
ವಿಷ್ಣುಪುರದಲ್ಲಿ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, "2017ರಿಂದ ಇಲ್ಲಿಯವರೆಗಿನ ಅಭಿವೃದ್ಧಿ ಕಾರ್ಯಗಳಿಂದಾಗಿ ಮಣಿಪುರದಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಸ್ವೀಕರಿಸಲಿದೆ" ಎಂದಿದ್ದಾರೆ.
"ಮಣಿಪುರ ಈ ಹಿಂದೆ ಮುಷ್ಕರಗಳು, ಬಾಂಬ್ ಸ್ಪೋಟಗಳು ಹಾಗೂ ಅಭದ್ರತೆಯ ವಾತಾವರಣದಲ್ಲಿತ್ತು. ಈಗ ಅಭಿವೃದ್ದಿಯ ಹಾದಿಯಲ್ಲಿದೆ. ಮಣಿಪುರದ ಜನತೆ ಸೂಕ್ತ ಸಮಯದಲ್ಲಿ ಬಿಜೆಪಿಯನ್ನು ಆಯ್ಕೆ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಆತ್ಮ ನಿರ್ಭರ ಭಾರತದ ಅಭಿಯಾನದಲ್ಲಿ ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ ಮುಂಚೂಣಿಯಲ್ಲಿದೆ" ಎಂದು ಹೇಳಿದ್ದಾರೆ.
ಜೆ ಪಿ ನಡ್ಡಾ ಅವರು ಎರಡು ದಿನಗಳ ಕಾಲ ಮಣಿಪುರ ಪ್ರವಾಸದಲ್ಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ದತೆ ಕುರಿತು ಪರಿಶೀಲನೆ ನಡೆಸುವುದಕ್ಕಾಗಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.