ಮೈಸೂರು, ಅ.10 (DaijiworldNews/PY): "ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಆಸಕ್ತಿ ಇಲ್ಲ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನವೆಂಬರ್ನಲ್ಲಿ ನಡೆಯಬೇಕಿತ್ತು. ಆದರೆ, ಸರ್ಕಾರಕ್ಕೆ ಚುನಾವಣೆ ನಡೆಸುವ ಆಸಕ್ತಿಯಿಲ್ಲ. ಕ್ಷೇತ್ರ ಮರುವಿಂಗಡಣೆಗಾಗಿ ಹೊಸ ಆಯೋಗ ರಚಿಸಿದ್ದಾರೆ. ನಾವೆಲ್ಲಾ ಅದನ್ನು ವಿಧಾನಸಭೆಯಲ್ಲಿ ವಿರೋಧ ಮಾಡಿದ್ದೆವು. ನಮಗೆ ಬಹುಮತ ಇಲ್ಲದ ಕಾರಣ ಬಿಲ್ ಪಾಸ್ ಮಾಡಿಕೊಂಡರು" ಎಂದಿದ್ದಾರೆ.
"ಕ್ಷೇತ್ರ ಮರು ವಿಂಗಡಣೆ ಆಯೋಗ ವರದಿ ಕೊಡುವವರೆಗೂ ಚುನಾವಣೆ ನಡೆಯಲ್ಲ. ಆರು ತಿಂಗಳು ಆಗುತ್ತದೋ , ಒಂದು ವರ್ಷ ಆಗುತ್ತದೋ ತಿಳಿದಿಲ್ಲ. ವಿಧಾನಸಭೆ ಚುನಾವಣೆ ಬಳಿಕ ಜಿ.ಪಂ, ತಾ.ಪಂ ಚುನಾವಣೆ ನಡೆದರೂ ಕೂಡಾ ಅಚ್ಚರಿ ಇಲ್ಲ" ಎಂದು ತಿಳಿಸಿದ್ದಾರೆ.