ಬೆಂಗಳೂರು, ಅ.09 (DaijiworldNews/PY): "ಬಿಜೆಪಿಯ ಹೈಕಮಾಂಡ್ ಐಟಿ, ಈಡಿಗಳ ಬೆದರಿಕೆ ಹಾಕಿಯೇ ಬಿಎಸ್ವೈ ಅವರನ್ನು ಕಣ್ಣೀರು ಹಾಕಿಸಿ, ಅಧಿಕಾರ ಕಸಿದಿದ್ದು ಸ್ಪಷ್ಟವಾಗಿದೆ. ಬಿಎಸ್ವೈ ಅವರನ್ನು ಸಂಪೂರ್ಣ ಮುಗಿಸುವುದೇ ಬಿಜೆಪಿ ಅಜೆಂಡಾ!" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಆಡಳಿತದಲ್ಲಿ ಯಾವ ಇಲಾಖೆಯೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಅಬಕಾರಿ ಇಲಾಖೆಯ ಜ್ಯೇಷ್ಠತಾ ಪಟ್ಟಿಯ ಗೋಲ್ಮಾಲ್ ಸಚಿವರ ಗಮನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ, ಹಾಗಾದರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸಿ ಇನ್ನೂ ಜಾರಿಯಲ್ಲಿದೆಯೇ? 'ಸೂಪರ್ ಸಿಎಂ' ಹಸ್ತಕ್ಷೇಪ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲೂ ಮುಂದುವರೆದಿದೆಯೇ ಬಿಜೆಪಿ?" ಎಂದು ಕೇಳಿದೆ.
"ಬಿಸಿಯೂಟ ನೀಡುವವರ ತಂಗಳೂಟವನ್ನೂ ಕಿತ್ತುಕೊಂಡಿದೆ ಬಿಜೆಪಿಯ ಹೃದಯಶೂನ್ಯ ಸರ್ಕಾರ. ಬಿಸಿ ಊಟ ತಯಾರಕರಿಗೆ ಕಳೆದ 5 ತಿಂಗಳಿಂದ ಈ ನಯಾಪೈಸೆ ಸಂಬಳ ನೀಡಲಿಲ್ಲ, ತಾಂತ್ರಿಕ ತೊಡಕಿನ ಸಬೂಬು ಹೇಳಿ ಕರೋನಾ, ಲಾಕ್ಡೌನ್, ಬೆಲೆ ಏರಿಕೆಗಳಿಂದ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಬಡವರ್ಗಕ್ಕೆ ಸಂಬಳ ನೀಡದೆ ಹಿಂಸಿಸುವುದೇಕೆ ಬಿಜೆಪಿ?" ಎಂದು ಪ್ರಶ್ನಿಸಿದೆ.
"ಬಿಎಸ್ವೈ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎನ್ನುತ್ತಿದ್ದ ಬಿಜೆಪಿಗರು ಈಗ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎನ್ನುತ್ತಿದ್ದಾರೆ. ಕಣ್ಣೀರು ಹಾಕಿಸಿ ಬಿಎಸ್ವೈ ಅವರ ಅಧಿಕಾರ ಕಿತ್ತುಕೊಂಡ ಬಿಜೆಪಿ, ಈಗ ಅವರ ಆಪ್ತರನ್ನೇ ಟಾರ್ಗೆಟ್ ಮಾಡಿ ಐಟಿ ರೈಡ್ ಮಾಡಿಸಿದೆ. ಈ ಮೂಲಕ ಬಿಎಸ್ವೈ ಅವರನ್ನ ರಾಜಕೀಯವಾಗಿ ಸರ್ವನಾಶ ಮಾಡಲು 2ನೇ ಹೆಜ್ಜೆ ಇರಿಸಿದೆ" ಎಂದಿದೆ.
"ಕೆಲ ತಿಂಗಳ ಹಿಂದೆ ವಿಜಯೇಂದ್ರ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು, ಈಗ ಬಿಎಸ್ವೈ ಆಪ್ತರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಬಿಜೆಪಿಯ ಹೈಕಮಾಂಡ್ ಐಟಿ, ಈಡಿಗಳ ಬೆದರಿಕೆ ಹಾಕಿಯೇ ಬಿಎಸ್ವೈ ಅವರನ್ನು ಕಣ್ಣೀರು ಹಾಕಿಸಿ, ಅಧಿಕಾರ ಕಸಿದಿದ್ದು ಸ್ಪಷ್ಟವಾಗಿದೆ. ಬಿಎಸ್ವೈ ಅವರನ್ನು ಸಂಪೂರ್ಣ ಮುಗಿಸುವುದೇ ಬಿಜೆಪಿ ಅಜೆಂಡಾ!" ಎಂದು ಕಿಡಿಕಾರಿದೆ.
"ಮೋದಿಯವರ ನ್ಯೂ ಇಂಡಿಯಾದಲ್ಲಿ ಕೊಲೆ ಮಾಡಿದವರು ಸರ್ಕಾರದ ರಕ್ಷಣೆಯಲ್ಲಿ ತಪ್ಪಿಸಿಕೊಳ್ಳಬಹುದು. ಅತ್ಯಾಚಾರ ಮಾಡಿದವರು ರಾಜಾರೋಷವಾಗಿ ತಿರುಗಾಡಬಹುದು. ಭಯೋತ್ಪಾದಕರು ಸಂಸತ್ತಿನಲ್ಲಿ ಕೂರಬಹುದು. ಹಣವಂತರು ದೇಶವನ್ನೇ ಕೊಳ್ಳಬಹುದು. ಭ್ರಷ್ಟರು ತನಿಖೆ ಇಲ್ಲದೆ ಕ್ಲೀನ್ ಚಿಟ್ ಪಡೆಯಬಹುದು. ಆದರೆ ಅವರೆಲ್ಲರೂ ಬಿಜೆಪಿಯಲ್ಲಿರಬೇಕು ಅಷ್ಟೇ!" ಎಂದು ಹೇಳಿದೆ.
"ಭ್ರಷ್ಟಾಚಾರದ ಗುಂಡಿಯೊಳಗೆ ಬಿದ್ದಿರುವ ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರತಿ ದಿನವೂ ರಸ್ತೆ ಗುಂಡಿಗಳಿಂದಾಗಿ ಸಾವು ಸಂಭವಿಸುತ್ತಿದೆ. ಕರೋನಾದಿಂದ ಕೊಂದಿದ್ದಾಯ್ತು, ಇನ್ನೂ ಅದೆಷ್ಟು ಬಗೆಯಲ್ಲಿ ಜನರನ್ನು ಕೊಲ್ಲಲು ಯೋಚಿಸಿದೆ ಬಿಜೆಪಿ ಸರ್ಕಾರ?" ಎಂದು ಪ್ರಶ್ನಿಸಿದೆ.