ನವದೆಹಲಿ, ಅ.09 (DaijiworldNews/PY): "ಬಿಜೆಪಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ 2023ರ ವಿಧಾನಸಭೆ ಚುನಾವಣೆಯು ನನ್ನ ನೇತೃತ್ವದಲ್ಲಿ ನಡೆಯಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, "ಎಷ್ಟು ಅವಧಿಯವರೆಗೆ ನಾನು ಸಿಎಂ ಆಗಿರುತ್ತೇನೆ ಎನ್ನುವ ವಿಚಾರ ಮುಖ್ಯವಲ್ಲ. ಆ ಅವಧಿಯಲ್ಲಿ ಏನು ಮಾಡಬೇಕು ಎನ್ನುವುದು ಮುಖ್ಯ. ಹಾಗಾಗಿ ನನಗೆ ದೊರಕಿರುವ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. 2023ರ ವಿಧಾನಸಭೆ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ" ಎಂದು ಹೇಳಿದ್ದಾರೆ.
"ಈಗ ಬಿಜೆಪಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿ ಸಮಾಜದ ಎಲ್ಲಾ ವರ್ಗದವರನ್ನೂ ತಲುಪಿ ಅವರ ಬೆಂಬಲ ಪಡೆದಿದೆ. ಬಿಜೆಪಿಗೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರ ಬೆಂಬಲ ಸಿಕ್ಕಿದೆ" ಎಂದಿದ್ದಾರೆ.