ಮೈಸೂರು, ಅ.09 (DaijiworldNews/PY): "ಕಾಂಗ್ರೆಸ್ ಎರಡು ಉಪಚುನಾವಣೆಗಳಲ್ಲಿ ಗೆಲ್ಲಲಿದೆ. ಆದರೆ, ಉಪಚುನಾವಣೆಯ ಫಲಿತಾಂಶ ಭವಿಷ್ಯದ ಚುನಾವಣೆಯ ದಿಕ್ಸೂಚಿ ಎನ್ನುವುದಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಫಲಿತಾಂಶದಿಂದ ಸರ್ಕಾರದ ಮೇಕೆ ಜನರ ಅಭಿಪ್ರಾಯ ಏನು ಎನ್ನುವುದು ತಿಳಿಯುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ ಎರಡು ಉಪ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತದೆ" ಎಂದಿದ್ದಾರೆ.
"ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವ ಉದ್ದೇಶದಿಂದಲೇ ಜೆಡಿಎಸ್ನವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದಾರೆ. ಆದರೆ, ಜನರು ಬುದ್ಧಿವಂತರಾಗಿದ್ದು, ಈ ರೀತಿಯಾದ ತಂತ್ರಗಳು ಜನರಿಗೆ ತಿಳಿಯುತ್ತದೆ" ಎಂದು ಹೇಳಿದ್ದಾರೆ.
ಐಟಿ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಐಟಿ ದಾಳಿಯಲ್ಲಿ ರಾಜಕೀಯ ಇದೆ ಎನ್ನುವುದು ನನ್ನ ಅನುಮಾನ. ವಿಜಯೇಂದ್ರ, ಯಡಿಯೂರಪ್ಪ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ" ಎಂದಿದ್ದಾರೆ.
"ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಚರ್ಚೆ ಆಗಿಲ್ಲ. ಊಹಾಪೋಹದ ಬಗ್ಗೆ ಚರ್ಚಿಸುವುದು ಬೇಡ. ಆ ಬಗ್ಗೆ ನಾನು ಎಂದಿಗೂ ಯೋಚಿಸಿಲ್ಲ. ರಾಜ್ಯ ರಾಜಕಾರಣದಲ್ಲೇ ನಾನು ಸಕ್ರಿಯನಾಗಿರುತ್ತೇನೆ" ಎಂದು ತಿಳಿಸಿದ್ದಾರೆ.