ಲಕ್ನೋ, ಅ.09 (DaijiworldNews/PY): "ಲಖಿಂಪುರ್ ಖೇರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡದಿಂದ ಯಾರ ವಿರುದ್ದವೂ ಕ್ರಮ ಕೈಗೊಳ್ಳುವುದಿಲ್ಲ. ಸಾಕ್ಷಿ ಸಿಕ್ಕ ನಂತರ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ" ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಬಂಧಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆ, ಘಟನೆ ನಡೆದ ಆರು ದಿನಗಳ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಖಿಂಪುರ್ ಖೇರಿ ಘಟನೆ ದುರದೃಷ್ಟಕರ. ಈ ಘಟನೆಯ ವಿವರಗಳನ್ನು ಸರ್ಕಾರ ಆಳವಾಗಿ ಪರಿಶೀಲಿಸುತ್ತದೆ. ಘಟನೆಯನ್ನು ನ್ಯಾಯಾಂಗ ತನಿಖೆಗೂ ಒಳಪಡಿಸಲಾಗಿದೆ" ಎಂದಿದ್ದಾರೆ.
"ಪ್ರತಿಯೋರ್ವರಿಗೂ ಕಾನೂ ಭದ್ರತೆ ನೀಡುವ ಭರವಸೆ ನೀಡುವಾಗ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಯಾರೇ ಆಗಿರಲಿ ಕಾನೂನು ಕೈಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರ ಆಶಿಶ್ ಮಿತ್ರಾ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಶಾಸಕರಾಗಲಿ, ಪ್ರತಿಪಕ್ಷದ ಶಾಸಕಾಗಲಿ ಅಥವಾ ಯಾವುದೇ ಹುದ್ದೆಯಲ್ಲಿರುವವರಾಗಲಿ ನಾವು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಲಖಿಂಪುರ್ ಖೇರಿ ಘಟನೆಯ ಬಗ್ಗೆಯೂ ಸರ್ಕಾರ ಅದೇ ಕೆಲಸ ಮಾಡುತ್ತಿದೆ. ಸರ್ಕಾರದಿಂದ ವಿಶೇಷ ತನಿಖಾ ತಂಡ ಹಾಗೂ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ" ಎಂದು ತಿಳಿಸಿದ್ದಾರೆ.