ಬೆಂಗಳೂರು, ಅ.08 (DaijiworldNews/PY): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಆರೋಪಿಗಳು ಜೈಲು ಪಾಲಾಗಿದ್ದಾರೆ.
ಆರ್ಯನ್ ಖಾನ್ ಅವರನ್ನು ಆರ್ಥರ್ ರೋಡ್ ಜೈಲಿಗೆ ಕರೆದೊಯ್ಯಲಾಗಿದೆ. ಇತರ ಆರೋಪಿಗಳ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಜೈಲಿಗೆ ಕರೆದೊಯ್ದಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.
ಎನ್ಸಿಬಿಯ ಕಸ್ಟಡಿ ಅವಧಿ ಮುಗಿದ ಕಾರಣ, ನ್ಯಾಯಾಲಯ ಆರ್ಯನ್ ಖಾನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮುಂಬೈ ನ್ಯಾಯಾಲಯದಲ್ಲಿ ಇಂದು ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆರ್ಯನ್ ಪರ ವಕೀಲ ಸತೀಶ್ ಮಾನೆಶಿಂಧೆ ಅವರು ವಾದ ಮಂಡಿಸುತ್ತಿದ್ದಾರೆ. ಆರ್ಯನ್ ವಿರುದ್ದ ಸಾಕ್ಷಾಧಾರಗಳ ಕೊರತೆ ಇದೆ. ಹಕ್ಕಾಗಿ ಜಾಮೀನನ್ನು ಕೇಳುತ್ತಿಲ್ಲ. ಈವರೆಗೆ ಎನ್ಸಿಬಿ ಕಸ್ಟಡಿಯಲ್ಲಿದ್ದು, ವಿಚಾರಣೆಗೆ ಬೇಕಾದ ನೆರವು ನೀಡಿಯಾಗಿದೆ. ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳು ಇಲ್ಲ. ಹಾಗಾಗಿ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದಾರೆ.
ಅ.2ರಂದು ಮುಂಬೈನ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಕೂಡಾ ಇದ್ದರು. ಈ ವೇಳೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಈವರೆಗೆ ಆರ್ಯನ್ ಖಾನ್ ಅವರನ್ನು ಎರಡು ಬಾರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.