ರಾಯಚೂರು, ಅ.08 (DaijiworldNews/PY): "ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಕುರಿತು ಗೊತ್ತಿಲ್ಲ" ಎಂದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಪ್ರಧಾನಿ ದೇವೇಗೌಡರು ಆರ್ಎಸ್ಎಸ್ ಕುರಿತು ಹೊಗಳುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದಲ್ಲಿ ತಾಲಿಬಾನ್ನಲ್ಲಿ ಆಗುತ್ತಿದ್ದ ಪರಿಸ್ಥಿತಿ ರಾಜ್ಯದಲ್ಲೂ ಆಗುತ್ತಿತ್ತು. ಆರ್ಎಸ್ಎಸ್ ಸಂಸ್ಕೃತಿ, ದೇಶ ಭಕ್ತಿ ಇರುವ ಕಾರಣ ಇಂದು ಭಾರತ ಸುರಕ್ಷಿತವಾಗಿದೆ. ಆರ್ಎಸ್ಎಸ್ ದೇಶ ಕಟ್ಟು ಕಾರ್ಯ ಮಾಡುತ್ತಿದೆ" ಎಂದಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತರ ಮೇಲೆ ಐಟಿ ದಾಳಿ ಕುರಿತು ಮಾತನಾಡಿದ ಅವರು, "ಐಟಿ ದಾಳಿ ಆಗಿರುವುದು ಹೊಸದೇನಲ್ಲ. ಇಂದು ಅವರ ಮೇಲೆ ಐಟಿ ದಾಳಿ ನಡೆದಿದೆ. ನಾಳೆ ಇನ್ನೊಬ್ಬರ ಮೇಲೆ ಐಟಿ ದಾಳಿ ಆಗುತ್ತದೆ" ಎಂದು ಹೇಳಿದ್ದಾರೆ.
"ಪಂಜಾಬ್ನಲ್ಲಿಯೂ ಸಿದ್ದು ಇದ್ದಾನೆ. ಇಲ್ಲಿಯೂ ಸಿದು ಇದ್ದಾನೆ. ಪಂಜಾಬ್ನಲ್ಲಿಯೂ ಕ್ಯಾಪ್ಟನ್ ಇದ್ದಾನೆ. ರಾಜ್ಯದಲ್ಲಿ ಸಿದ್ದು ಕ್ಯಾಪ್ಟನ್. ಕಾಂಗ್ರೆಸ್ನಲ್ಲಿ ಸಿಎಂಗಾಗಿ ಮೂರು ಸಮುದಾಯಗಳ ಕೂಗು ಇದೆ" ಎಂದಿದ್ದಾರೆ.
ಬಿಜೆಪಿ ಕೊಲೆಗಡುಕರ ಸರ್ಕಾರ ಎಂದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಅಧಿಕಾರಕ್ಕಾಗಿ ಸಿದ್ದರಾಮಯ್ಯ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಮಾಡಲು ಹೊರಟಿದೆ" ಎಂದು ದೂರಿದ್ದಾರೆ.