ಹುಬ್ಬಳ್ಳಿ, ಅ.08 (DaijiworlNews/HR): ಭಾರತದಲ್ಲಿ ಗಟ್ಟಿ ನಾಯಕತ್ವ ಹಾಗೂ ಇಚ್ಛಾಶಕ್ತಿಯ ನಾಯಕ ಇದ್ದರೆ ಎಂತಹದ್ದೇ ಸಮಸ್ಯೆ ಎದುರಾದರೂ ನಿರ್ವಹಿಸಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿ ಅವರು, "ಕೊರೊನಾ ಸಂಕಷ್ಟದಿಂದ ಪಾರಾಗಲು ಲಸಿಕೆ ನೀಡಿಕೆ ನಿಟ್ಟಿನಲ್ಲಿ ಹಣ ಹೊಂದಿಸಲು ರಾಜ್ಯ ಸರಕಾರಗಳು ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ರಾಜ್ಯ ಸರಕಾರ ಲಸಿಕೆಗಾಗಿ 1,000 ಕೋಟಿ ರೂ.ಗಳನ್ನು ಹೊಂದಿಸಬೇಕಿತ್ತು. ಆದರೆ ಪ್ರಧಾನಿಯವರು ದೇಶಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿದ್ದು, ಇದುವರೆಗೆ ಸುಮಾರು 98 ಕೋಟಿ ಜನರಿಗೆ ದೇಶದಲ್ಲಿ ಲಸಿಕೆ ಹಾಕಲಾಗಿದೆ" ಎಂದರು.
ಇನ್ನು "ಅಪ್ಘಾನಿಸ್ತಾನದಲ್ಲಿ ತಾಲಿಬಾನ್ಗಳ ಹಿಡಿತದಿಂದ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಸಮಸ್ಯೆ, ದಾಳಿ ಹೆಚ್ಚಾಗಲಿದೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಅಂತಹ ಕೃತ್ಯಗಳಿಗೆ ಅವಕಾಶ ನೀಡದೆ ಪ್ರಧಾನಿಯವರು ತಮ್ಮ ಗಟ್ಟಿ ನಾಯಕತ್ವ ತೋರಿದ್ದಾರೆ. ಒಂದು ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರು ಉಳಿದಿದ್ದರೆ ಜೀವಿತಾವಧಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು" ಎಂದು ಹೇಳಿದ್ದಾರೆ.