ಬೆಂಗಳೂರು, ಅ.08 (DaijiworldNews/PY): "ನನ್ನನ್ನು ಕೆಣಕಲು ಬರಬೇಡಿ. ಕೆಣಕಿದರೆ ಸರಿ ಇರಲ್ಲ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಎಸ್ ಆರ್ ಬೊಮ್ಮಾಯಿ ಸರ್ಕಾರ ತೆಗೆದವರು ರಾಮಕೃಷ್ಣ ಹೆಗಡೆಯವರು. ಬೇಕಾದರೆ ಇದಕ್ಕೆ ಸಾಕ್ಷಿ ನೀಡುತ್ತೇನೆ. ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬಂತು ಎನ್ನುವುದು ತಿಳಿದಿದೆ. ನೆಹರೂ ಅವರ ಕಾಲದಿಂದ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂತು ಎನ್ನುವುದು ಎಲ್ಲರಿಗೂ ತಿಳಿದಿದೆ" ಎಂದಿದ್ದಾರೆ.
"ಹೆಚ್ ಡಿ ಕುಮಾರಸ್ವಾಮಿ ಸಿಎಂ ಆದರೆ ಹಣಕಾಸಿನ ಸಮಸ್ಯೆ ಇದ್ದರೂ ಕಾರ್ಯಗತ ಮಾಡುತ್ತೇವೆ. ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ಮಾಡಿದ್ದೆವು. ಆ ಸಂದರ್ಭ ಇದನ್ನೆಲ್ಲಾ ನಿರೀಕ್ಷೆ ಮಾಡಿರಲಿಲ್ಲ. ಅಧಿಕಾರಕ್ಕೆ ಬಂದಲ್ಲಿ 28 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದರು. ಆಗ ಕುಮಾರಸ್ವಾಮಿ ಹೇಳಿದ ಮಾತನ್ನು ನನಗೆ ನಂಬಲು ಆಗಿರಲಿಲ್ಲ. ಸಾಲಮನ್ನಾ ಹೇಗೆ ಮಾಡುತ್ತಾನೆ ಎಂದು ಅನುಮಾನ ಇತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು" ಎಂದು ತಿಳಿಸಿದ್ದಾರೆ.
"ಕುಮಾರಸ್ವಾಮಿ ಏನು ಆರ್ಥಿಕ ತಜ್ಞ ಅಲ್ಲ. ಸಾಕಷ್ಟು ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿಲ್ಲ. ಆದರೆ, ಸಂಪನ್ಮೂಲ ಕ್ರೂಢೀಕರಿಸಿಯೋಜನೆ ತಂದರು. ಅಲ್ಲದೇ, ಹಿಂದಿನ ಎಲ್ಲಾ ಯೋಜನೆಗಳಿಗೆ ಹಣ ಹೊಂದಿಸಿದರು. ಕುಮಾರಸ್ವಾಮಿ ಹೇಳಿದ ಹಾಗೆ ಮಾಡುತ್ತಾರೆ" ಎಂದು ಹೇಳಿದ್ದಾರೆ.
"ಸೋನಿಯಾ ಗಾಂಧಿಗೆ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಹೇಳಿದ್ದೆ. ನಾವು ಸಿಎಂ ಆದರೆ ಅಭಾಸ ಆಗುತ್ತದೆ ಎಂದು ಖರ್ಗೆ ಅವರನ್ನು ಸಿಎಂ ಮಾಡಲು ಹೇಳಿದ್ದೆ. ಖರ್ಗೆ ಅವರು ಕೂಡಾ ಈ ಮಾತನ್ನು ಒಪ್ಪಿದ್ದರು. ಸೋನಿಯಾ ಗಾಂಧಿಗೆ ಒಪ್ಪಿಸುತ್ತೇನ ಎಂದು ಗುಲಾಮ್ನಬಿ ಅಜಾದ್ ಹೇಳಿದ್ದರು. ಆದರೆ, ಅಂತಿಮವಾಗಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಒಪ್ಪಿಸಿದರು" ಎಂದಿದ್ದಾರೆ.
"ನೂರಾರು ಸೀಟು ಇಟ್ಟುಕೊಂಡಿದ್ದ ಬಿ ಎಸ್ ಯಡಿಯೂರಪ್ಪ ವಿಪಕ್ಷ ನಾಯಕ ಆದರು. ಸಾಲಮನ್ನಾ ಮಾಡುತ್ತೀರಾ ಇಲ್ಲವಾ ಎಂದು ಏಕವಚನದಲ್ಲೇ ಮಾತನಾಡಿದ್ದರು. ಸಿದ್ದರಾಮಯ್ಯ ಬಜೆಟ್ ವಿಚಾರದಲ್ಲೂ ಕೂಡಾ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಎಲ್ಲಾ ಭಾಗ್ಯಗಳನ್ನು ಮುಂದುವರಿಸುವಂತೆ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ 50 ಸಾವಿರ ಸಾಲಮನ್ನಾದೊಂದಿಗೆ ಕುಮಾರಸ್ವಾಮಿ ಕೂಡಾ ಸಾಲಮನ್ನಾ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ವಿಜಯಪುರದಲ್ಲಿ ಕಾಂಗ್ರೆಸ್ ಎಷ್ಟು ಮುಸ್ಲಿಂ ನಾಯಕರನ್ನು ಗೆಲ್ಲಿಸಿದ್ದಾರೆ. ಮನಗೂಳಿಯನ್ನು ಮನೆ ಮಗನಂತೆ ಬೆಳೆಸಿಕೊಂಡು ಬಂದೆ. ಹೆಗಡೆ ಅವರು ಸಿಎಂ ಆಗಿದ್ದಾಗ ಅಧಿವೇಶನದಲ್ಲಿ ಮನಗೂಳಿ ಮಾತನಾಡಿದ್ದರು. ನಿಮ್ಮ ಪ್ರತಿಮೆ ಮಾಡುತ್ತೇನೆ ಎಂದು ಮನಗೂಳಿ ತಿಳಿಸಿದ್ದರು. ಸಿಎಂ ಹೆಗಡೆ ಅವರಿಂದಲೇ ಪ್ರತಿಮೆಗೆ ಶಂಕು ಸ್ಥಾಪನೆ ಮಾಡಿದ್ದರು" ಎಂದಿದ್ದಾರೆ.
"ನಾನು ಕಾಂಗ್ರೆಸ್ ಅನ್ನು ಮುಗಿಸುವ ಬಗ್ಗೆ ಮಾತನಾಡಿಲ್ಲ. ಆರ್ಎಸ್ಎಸ್ ಬಗ್ಗೆ ನಾನು ಮಾತನಾಡಿದ್ದೇನೆ ಎನ್ನುವುದು ಸುಳ್ಳು. ಆರ್ಎಸ್ಎಸ್ಗೂ ನನಗೂ ಏನು ಸಂಬಂಧ?. ಆರ್ಎಸ್ಎಸ್ ಬಗ್ಗೆ ಗಂಧವೂ ಗೊತ್ತಿಲ್ಲ. ರಾಮ್ಲೀಲಾ ಮೈದಾನದಲ್ಲಿ ಯಾರ್ಯಾರು ಏನು ಹೇಳಿದ್ದಾರ ಎಲ್ಲವೂ ನನಗೆ ತಿಳಿದಿದೆ. ಈ ಬಗ್ಗೆ ಈಗ ಚರ್ಚೆ ಬೇಡ" ಎಂದು ತಿಳಿಸಿದ್ದಾರೆ.
"ನಾನು ಸಿಂದಗಿಯಲ್ಲಿ ಹೆಚ್ಚು ಪ್ರಚಾರ ಮಾಡಿದ್ದೇನೆ. ಮತ ಕೇಳುವ ಎಲ್ಲಾ ಹಕ್ಕು ನನಗಿದೆ. ನಾನು ಪ್ರಧಾನಿಯಾಗಿದ್ದ ಸಂದರ್ಭ ಯುಕೆಪಿಗೆ ಅನುದಾನ ನೀಡಿದ್ದೆ. ಕಾವೇರಿ ನೀರಾವರಿಗೆ ಕೊಟ್ಟಿರಲಿಲ್ಲ. ನಾನು ಸಿಂದಗಿಯಲ್ಲೇ ಹೆಚ್ಚು ವಾಸ್ತವ್ಯ ಮಾಡುತ್ತೇನೆ" ಎಂದು ಹೇಳಿದ್ದಾರೆ.