ರಾಮನಗರ, ಅ.08 (DaijiworldNews/PY): "ಆರ್ಎಸ್ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದು, ಬಹಿರಂಗ ಹೇಳಿಕೆಗೆ ಸಿದ್ದ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಭಯೋತ್ಪಾದಕರು ಶಾಲೆಗೆ ನುಗ್ಗಿ ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಗಡಿಯಲ್ಲಿ ಈ ವರ್ಷ ಅಧಿಕ ಸೈನಿಕರ ಸಾವಾಗಿದೆ. ಇದೇನಾ ಆರ್ಎಸ್ಎಸ್ ನಿಮಗೆ ಸರ್ಕಾರ ಹೇಗೆ ನಡೆಸುವುದು ಎಂದು ಹೇಳಿಕೊಟ್ಟಿರುವ ಪಾಠ?" ಎಂದು ಕೇಳಿದ್ದಾರೆ.
"ಆರ್ಎಸ್ಎಸ್ ಜೊತೆ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.
"ಅಲ್ಪಸಂಖ್ಯಾತರು ರಾಜ್ಯದಲ್ಲಿ ಜಾತ್ಯಾತೀತತೆ ಉಳಿಸಲು ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಬೆಂಬಲಿಸಿ ಎಂದು ನಾನು ಮುಕ್ತವಾಗಿ ಹೇಳಿದ್ದೇನೆ. ಎಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುಂದೆ ಇದೆಯೋ ಅಲ್ಲಿ ಕಾಂಗ್ರೆಸ್ ಬೆಂಬಲಿಸಿ. ಎಲ್ಲಿ ಜೆಡಿಎಸ್ ಬಿಜೆಪಿಗಿಂತ ಮುಂದೆ ಇರುತ್ತದೋ ಅಲ್ಲಿ ಜೆಡಿಎಸ್ ಅನ್ನು ಬೆಂಬಲಿಸಿ ಎಂದು ಕೋರಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರೀತಿ ಕೀಳುಮಟ್ಟದ ರಾಜಕಾರಣ ಮಾಡುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.