ಬೆಂಗಳೂರು, ಅ.08 (DaijiworldNews/PY): "ಐಟಿ ದಾಳಿಗೂ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ. ಸತ್ಯಾಂಶ ಹೊರ ಬರುತ್ತದೆ ಎಂದು ಅವರೇ ತಿಳಿಸಿದ್ದಾರೆ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಬಿಜೆಪಿ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರನ್ನು ಹದ್ದುಬಸ್ತಿನಲ್ಲಿ ಇಡುವುದಕ್ಕೆ ಆಗುವುದಿಲ್ಲ" ಎಂದಿದ್ದಾರೆ.
ಆರ್ಎಸ್ಎಸ್ ಬಗ್ಗೆ ಹೆಚ್ಡಿಕೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಂಘ ಪರಿವಾರದ ನಾಯಕರಿಗೆ ಕುರ್ಚಿಗೆ ವ್ಯಾಮೋಹ ಇಲ್ಲ. ಸಂಘಪರಿವಾರದ ವಿರುದ್ದ ಟೀಕೆ ಮಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ. ಉಪಚುನಾವಣೆಯ ಹಿನ್ನೆಲೆ ಕಾಂಗ್ರೆಸ್, ಜೆಡಿಎಸ್ ನಾಯಕರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಆರ್ಎಸ್ಎಸ್ನದ್ದು ತಾಲಿಬಾನ್ ಸಂಸ್ಕೃತಿ ಅಲ್ಲ. ಕಾಂಗ್ರೆಸ್ನವರದ್ದು ಕೊಳ್ಳಿ ಇಡುವ ಸಂಸ್ಕೃತಿ. ಕಾಂಗ್ರೆಸ್ಸಿಗರು ವಿಕೃತ ಮನಸ್ಸಿನವರು. ಅನಗತ್ಯವಾಗಿ ಆರ್ಎಸ್ಎಸ್ ಕುರಿತು ಟೀಕೆ ಮಾಡುವುದು ಸೂಕ್ತವಲ್ಲ" ಎಂದು ಕಿಡಿಕಾರಿದ್ದಾರೆ.