ನವದೆಹಲಿ, ಅ.08 (DaijiworldNews/PY): "ಲಖಿಂಪುರ ಖೇರಿ ಘಟನೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಮೌನವಹಿಸಿದ್ದಾರೆ?" ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಲಖಿಂಪುರ್ ಖೇರಿ ಘಟನೆ ಭಯನಾಕವಾದುದು. ಈ ವಿಚಾರವಾಗಿ ಮೋದಿ ಜೀ ನೀವ್ಯಾಕೆ ಮೌನವಾಗಿದ್ದೀರಿ? ನಿಮ್ಮಂದ ನಾವು ಕೇವಲ ಅನುಕಂಪದ ಮಾತನ್ನು ಬಯಸುತ್ತೇವೆ. ಆದರೆ, ಅದು ಕಷ್ಟವಾಗಬಾರದು" ಎಂದಿದ್ದಾರೆ.
"ವಿರೋಧ ಪಕ್ಷದಲ್ಲಿ ನೀವಿದಿದ್ದರೆ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಿರಿ? ದಯವಿಟ್ಟು ನಮಗೆ ಹೇಳಿ" ಎಂದು ಕೇಳಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ ವಿಚಾರವಾಗಿ ಸ್ವಯಂಪ್ರೇರಿತ ದೂರ ದಾಖಲಿಸಿಕೊಳ್ಳುವಂತೆ ಕಪಿಲ್ ಸಿಬಲ್ ಅವರು ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಿದ್ದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ದ ಆಂದೋಲನ ಮಾಡುತ್ತಿದ್ದ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ದ ಒಂದು ಗುಂಪು ಲಖಿಂಪುರ ಖೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭಎರಡು ಎಸ್ಯವಿ ಕಾರುಗಳು ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದರು. ಘಟನೆಯಿಂದ ಕೋಪಗೊಂಡ ಪ್ರತಿಭಟನಾಕಾರರು ಬಿಜೆಪಿಯ ಇಬ್ಬರು ಕಾರ್ಯಕರ್ತರು ಹಾಗೂ ಚಾಲಕರನ್ನು ಹತ್ಯೆಗೈದಿದ್ದರು.
ಲಖಿಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ.