ನವದೆಹಲಿ, ಅ.08 (DaijiworldNews/PY): ಲಖಿಂಪುರ ಖೇರಿ ಹಿಂಸಾಚಾರವನ್ನು ಆರ್ಎಸ್ಎಸ್ ಹಿರಿಯ ಕಾರ್ಯಕಾರಿ ಇಂದ್ರೇಶ್ ಕುಮಾರ್ ಖಂಡಿಸಿದ್ದು, "ದೇಶದಲ್ಲಿ ವಿಪಕ್ಷಗಳು ದ್ವೇಷ ಹಾಗೂ ಹಿಂಸೆಯ ವಾತಾವರಣ ಸೃಷ್ಟಿಸುತ್ತಿವೆ" ಎಂದು ದೂರಿದ್ದಾರೆ.
ಲಖಿಂಪುರ-ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗವನ್ನು ರಚನೆ ಮಾಡಿರುವುದ್ಕಕಾಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅಭಿನಂದಿಸಿದ್ದಾರೆ.
"ದೇಶದಲ್ಲಿ ಕೆಲವು ವಿಪಕ್ಷ ನಾಯಕರು ಹಾಗೂ ಪಕ್ಷಗಳೂ ದ್ವೇಷ ಹಾಗೂ ಹಿಂಸೆಯ ವಾತಾವರಣವನ್ನು ಸೃಷ್ಟಿಸುತ್ತಿವೆ. ಲಖಿಂಪುರ ಖೇರಿಯಲ್ಲಿ ನಡೆದ ಘಟನೆ ಖಂಡನೀಯ. ಉತ್ತರ ಪ್ರದೇಶದ ಯೋಗಿ ಸರ್ಕಾರ ಘಟನೆಯ ತನಿಖೆಗಾಗಿ ಆಯೋಗ ರಚಿಸಿದ್ದು, ಇದರಿಂದ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ" ಎಂದಿದ್ದಾರೆ.
"ವಿಪಕ್ಷದ ನಾಯಕರು ರೈತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ದೇಶದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ರೈತರಿಗಾಗಿ ಕೇಂದ್ರದ ಬಾಗಿಲು ಸದಾ ತೆರೆದಿದೆ. ಹಾಗಾಗಿ ಪ್ರತಿಭಟನಾಕಾರರು ಮುಂದೆ ಬಂದು ಸರ್ಕಾರದ ಜೊತೆ ಮಾತುಕತೆ ನಡೆಸಬೇಕು" ಎಂದು ತಿಳಿಸಿದ್ದಾರೆ.