ದಾವಣಗೆರೆ, ಅ.08 (DaijiworldNews/PY): "ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರು ಅಕ್ಟೋಬರ್ 16ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಹಾಗೂ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದಾರೆ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, "ಆರ್ ಅಶೋಕ್ ಅವರು ನನ್ನ ಮನವಿಯ ಮೇರೆಗೆ ಅಕ್ಟೋಬರ್ 16ರಂದು ಹೊನ್ನಾಳಿಯಲ್ಲಿ ತಮ್ಮ ಗ್ರಾಮವಾಸ್ತವ್ಯ ಪ್ರಾರಂಭಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ" ಎಂದಿದ್ದಾರೆ.
"ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಜನರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನ್ಯಾಮತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ನೀಡುವ ಬಗ್ಗೆ ಅಕ್ಟೋಬರ್ 16ರಂದು ಘೋಷಣೆ ಮಾಡುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.