ಅರುಣಾಚಲ, ಅ.08 (DaijiworldNews/PY): ಭಾರತ ಹಾಗೂ ಚೀನಾ ಪಡೆಗಳು ಕಳೆದ ವಾರ ಮತ್ತೊಂದು ಮುಖಾಮುಖಿ ಸಂಘರ್ಷ ನಡೆದಿದ್ದು, ಈ ಸಂಘರ್ಷದಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಮಂದಿ ಚೀನಿ ಸೈನಿಕರನ್ನು ತಡೆಹಿಡಿಯಲಾಗಿದೆ.
ಕಳೆದ ವಾರ ಚೀನಾದ ಗಡಿಯ ಹತ್ತಿರ ಗಸ್ತು ತಿರುತ್ತಿರುವ ಸಂದರ್ಭ ಭಾರತ ಹಾಗೂ ಚೀನಾ ಪಡೆಗಳ ನಡುವೆ ಮುಖಾಮುಖಿ ಸಂಭವಿಸಿದೆ. ಗಡಿಯ ಸಮೀಪ ಸುಮಾರು 200 ಚೀನಿ ಸೈನಿಕರನ್ನು ಭಾರತೀಯ ಪಡೆಗಳು ತಡೆದಿವೆ. ಬಳಿಕ ಸ್ಥಳೀಯ ಕಮಾಂಡರ್ಗಳು ಸಮಸ್ಯೆ ಬಗೆಹರಿಸಿದ ಬಳಿಕ ಎರಡೂ ಕಡೆಯ ಪಡೆಗಳು ಬೇರ್ಪಟ್ಟವು.
ಎರಡೂ ಪಡೆಗಳ ನಡುವೆ ಮುಖಾಮುಖಿಯು ಕೆಲವು ಗಂಟೆಗಳ ಕಾಲ ನಡೆದವು. ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳ ಪ್ರಕಾರ ಸಮಸ್ಯೆ ಬಗೆಹರಿಸಲಾಗಿದೆ. ಮುಖಾಮುಖಿಯ ವೇಳೆ ಭಾರತೀಯ ರಕ್ಷಣೆಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
"ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಪ್ರೋಟೋಕಾಲ್ಗಳಿಗೆ ಬದ್ದವಾಗಿರುವ ಪೂರ್ವ ಲಡಾಖ್ನ ಗಡಿಗಳಲ್ಲಿ ಉಳಿದಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಚೀನಾ ಕೆಲಸ ಮಾಡುವ ನಿರೀಕ್ಷೆ ಇದೆ" ಎಂದು ಭಾರತ ತಿಳಿಸಿದೆ.
"ಈ ಪ್ರದೇಶದ ಶಾಂತಿಗೆ ಚೀನಾ ಕಡೆಯ ಪ್ರಚೋದನಾಕಾರಿ ನಡವಳಿಕೆ ಹಾಗೂ ಏಕಪಕ್ಷೀಯ ಕ್ರಮಗಳು ಭಂಗ ಉಂಟುಮಾಡಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.