ತಿರುವನಂತಪುರಂ, ಅ. 07 (DaijiworldNews/SM): ಕೊರೋನಾ ಕಾರಣದಿಂದಾಗಿ ಶಬರಿಮಲೆಯ ಅಯ್ಯಪ್ಪ ಸನ್ನಿದಾನಕ್ಕೆ ಭಕ್ತರ ಪ್ರವೇಶಕ್ಕೆ ಕೆಲವು ಷರತ್ತುಗಳೊಂದಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಡುವೆ ಈ ಬಾರಿಯ ಮಂಡಲ-ಮಕರವಿಳಕ್ಕು ಉತ್ಸವದ ಸಮಯದಲ್ಲಿ ನಿತ್ಯ 25 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಸಂಬಂಧಿಸಿದಂತೆ ನಡೆದ ಉನ್ನತ ತಜ್ಞರ ಸಮಿತಿ ಸಭೆಯಲ್ಲಿ ಚರ್ಚಿಸಿ ಸಿಎಂ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಆನ್ ಲೈನ್ ಮೂಲಕ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, 'ವರ್ಚುವಲ್ ಕ್ಯೂ' ವ್ಯವಸ್ಥೆಯ ಮೂಲಕ ಬುಕ್ ಮಾಡಬಹುದಾಗಿದೆ. ಹಾಗೂ ಭಕ್ತರು ವ್ಯಾಕ್ಸಿನ್ ಪಡೆದಿರಬೇಕು ಹಾಗೂ ನೆಗೆಟಿವ್ ವರದಿ ಹೊಂದಿರಬೇಕು. ಇನ್ನು ಭಕ್ತರಿಗೆ ಏರುಮಲೆ ಮತ್ತು ಪುಲ್ಮೇಡು ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಪಾದಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ.
ಪಂಪಾ ನದಿಯಲ್ಲಿ ಸ್ನಾನ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಶಬರಿಮಲೆಯ ಸನ್ನಿಧಾನದಲ್ಲಿ ಯಾತ್ರಾರ್ಥಿಗಳಿಗೆ ಉಳಿಯಲು ಅವಕಾಶವಿಲ್ಲ ಎಂದು ತಿಳಿದುಬಂದಿದೆ.