ಬೆಂಗಳೂರು, ಅ.07 (DaijiworldNews/PY): "ಇಂಧನತೈಲಗಳ ಬೆಲೆಗಳು ಮೋದಿಯವರ ಬುಲೆಟ್ ಟ್ರೈನ್ನಂತೆಯೇ ಮುನ್ನುಗ್ಗುತ್ತಿದೆ! ಮೋದಿಯವರ ಅಚ್ಛೆ ದಿನ್ ಅಂದರೆ ಇದೇನಾ?" ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪೆಟ್ರೋಲ್, "ಡೀಸೆಲ್ ದೇಶ ಹಿಂದೆಂದೂ ಕಾಣದ ಐತಿಹಾಸಿಕ ಏರಿಕೆ ಕಂಡಿದೆ, 100ರೂ ಗಡಿ ದಾಟಿದೆ. ಪೆಟ್ರೋಲ್ ದರ ₹75 ಇದ್ದಾಗ ಸೈಕಲ್ ಏರಿದ್ದ ಶೂರರೆಲ್ಲ ಈಗ ಎಲ್ಲಿ ಅಡಗಿದ್ದಾರೆ? ಗ್ಯಾಸ್ ದರ ₹1000 ಗಡಿಗೆ ಬಂದಿದೆ, ₹414 ಇದ್ದಾಗ ಬೀದಿಯಲ್ಲಿ ಹೊರಳಾಡಿದ ಬಿಜೆಪಿ ಮಹಾಶೂರರೆಲ್ಲ ಈಗ ಎಲ್ಲಿ ಮಲಗಿದ್ದಾರೆ?" ಎಂದು ಕೇಳಿದೆ.
"ಯುಪಿಎ ಸರ್ಕಾರದ ಅಡುಗೆ ಅನಿಲ ಸಂಪರ್ಕದ ಯೋಜನೆಯ ಹೆಸರು ಬದಲಿಸಿ 'ಉಜ್ವಲ' ಮಾಡಿದರು. ಯುಪಿಎ ಸರ್ಕಾರ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನೂ ತೆಗೆದರು. ಮೊದಲು ಸಬ್ಸಿಡಿ ಬಿಟ್ಟುಕೊಡಿ ಎಂದವರು ಈಗ ಬೆಲೆ ಏರಿಸಿ ಜೀವವನ್ನೂ ಬಿಟ್ಟು ಬಿಡಿ ಎನ್ನುತ್ತಿದೆ ಬಿಜೆಪಿ. ಗ್ಯಾಸ್ ಸಬ್ಸಿಡಿ ತೆಗೆದಿದ್ದೇಕೆ ಬಿಜೆಪಿ?" ಎಂದು ಪ್ರಶ್ನಿಸಿದೆ.
"ಇಂಧನತೈಲಗಳ ಬೆಲೆಗಳು ಮೋದಿಯವರ ಬುಲೆಟ್ ಟ್ರೈನ್ನಂತೆಯೇ ಮುನ್ನುಗ್ಗುತ್ತಿದೆ! ಡೀಸೆಲ್ ಬೆಲೆ ಐತಿಹಾಸಿಕವಾಗಿ ಸೆಂಚುರಿ ಭಾರಿಸಿದೆ, ಪೆಟ್ರೋಲ್ ಬೆಲೆ ಡಬಲ್ ಸೆಂಚುರಿಯತ್ತ ಸಾಗಿದೆ. ಅಡುಗೆ ಸಿಲಿಂಡರ್ ಹೊತ್ತಿ ಉರಿಯುತ್ತಿದೆ! ಮೋದಿಯವರ ಅಚ್ಛೆ ದಿನ್ ಅಂದರೆ ಇದೇನಾ ಬಿಜೆಪಿ?" ಎಂದು ಕೇಳಿದೆ.
"ಬಿಜೆಪಿ ಆಡಳಿತದಲ್ಲಿ ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಮೈಸೂರು ಅತ್ಯಾಚಾರದ ಘಟನೆಯ ನಂತರವೂ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸದೆ ನಿರ್ಲಕ್ಷ್ಯವಹಿಸಿದೆ. ರಕ್ಷಣೆಯ ವಿಷಯದಲ್ಲಿ ಗಂಭೀರ ಪ್ರಯತ್ನಗಳನ್ನೇ ಮಾಡದಿರುವುದು ಗೃಹಸಚಿವರ ಅಸಾಮರ್ಥ್ಯಕ್ಕೆ ಹಿಡಿದ ಕನ್ನಡಿ" ಎಂದು ಕಿಡಿಕಾರಿದೆ.