ಮಧುರೈ, ಅ 08 (DaijiworldNews/MS): ಓರ್ವ ಹಿರಿಯ ಪೊಲೀಸ್ ಅಧಿಕಾರಿಯು ತನ್ನ ಒಳ ಉಡುಪುಗಳನ್ನು ಮಾತ್ರ ಧರಿಸಿಕೊಂಡು ಆಯಿಲ್ ಮಸಾಜ್ ಮಾಡಿಸಿಕೊಂಡು, ಮತ್ತೊಂದೆಡೆ ಮದ್ಯದ ಬಾಟಲಿಯೊಂದಿಗೆ, ಕೊಳಲು ನುಡಿಸುವಿಕೆಯನ್ನು ಆನಂದಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಇದು ತಮಿಳುನಾಡು ಪೊಲೀಸ್ ಇಲಾಖೆಗೆ ತೀರಾ ಮುಜುಗರವನ್ನು ತಂದಿಟ್ಟಿದೆ.
ಇನ್ನು ಕೊಳಲು ನುಡಿಸುತ್ತಿರುವಾತ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಬ್ಯಾಂಡ್ನ ಸದಸ್ಯನಾಗಿದ್ದು, ತನ್ನ ಮೇಲಧಿಕಾರಿಗಳ ಅಣತಿಯಂತೆ ಅವರ ಸಂತೋಷಕ್ಕಾಗಿ ಕೊಳಲು ನುಡಿಸಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಯನ್ನು ತಮಿಳುನಾಡು ಸಶಸ್ತ್ರ ಬೆಟಾಲಿಯನ್, ಮಧುರೈನ ಉಪ ಕಮಾಂಡೆಂಟ್, ಜಿ. ಸೋಮಸುಂದರಂ ಎಂದು ಗುರುತಿಸಲಾಗಿದೆ.
ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದ ಒಬ್ಬ ಪೋಲಿಸ್ ರಹಸ್ಯವಾಗಿ ದೃಶ್ಯವನ್ನು ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಫೋಟೋ ವೈರಲ್ ಆಗಿದ್ದು, ತಮಿಳುನಾಡು ಪೊಲೀಸರು ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದರು.
ಸೋಮಸುಂದರಂ ಅವರು ಹಳೆಯ ಎಂಜಿಆರ್ ಚಲನಚಿತ್ರಗಳ ಮ್ಯೂಸಿಕ್ ವೀಡಿಯೋಗಳು ಮತ್ತು ಕೆಲವು ಯೂಟ್ಯೂಬ್ ಮತ್ತು ಟಿಕ್ಟಾಕ್ ವೀಡಿಯೋಗಳಲ್ಲಿ ಪೋಲಿಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲು ಗಮನ ಸೆಳೆದಿದ್ದರು.