ನವದೆಹಲಿ, ಅ.07 (DaijiworldNews/HR): ಬಿಜೆಪಿ ನಾಯಕರಾದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರನ್ನು 80 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗುರುವಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಅನೇಕ ಕೇಂದ್ರ ಸಚಿವರು, ಹಲವಾರು ರಾಜ್ಯ ನಾಯಕರು ಮತ್ತು ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರ ಹೆಸರುಗಳಿದ್ದು, 80 ಸಾಮಾನ್ಯ ಸದಸ್ಯರು, ಕಾರ್ಯನಿರ್ವಾಹಕರು, 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರನ್ನು ಹೊಂದಿದೆ.
ಇನ್ನು ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಈ ಪಟ್ಟಿಯಲ್ಲಿ ನಿರೀಕ್ಷಿತರಾಗಿದ್ದು, ಇತ್ತೀಚೆಗೆ ಸೇರ್ಪಡೆಗೊಂಡ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಸೇರಿಸಲಾಗಿದೆ. ಮಾಜಿ ಕೇಂದ್ರ ಸಚಿವರಾದ ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಕೂಡ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಉಳಿದಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪ್ರತಿ ವರ್ಷ ನಡೆಯುತ್ತಿದ್ದು,ಇದನ್ನು ಆಂತರಿಕ ಪ್ರಜಾಪ್ರಭುತ್ವಕ್ಕಾಗಿ ಬಿಜೆಪಿಯ ಸಾಂವಿಧಾನಿಕ ಕಾರ್ಯವಿಧಾನವೆಂದು ಪರಿಗಣಿಸಲಾಗಿದೆ.