ಬೆಂಗಳೂರು, ಅ.07 (DaijiworldNews/PY): ದುಬಾರಿ ದುನಿಯಾದಲ್ಲಿ ಮೋದಿಯವರ ಶ್ರೀಮಂತ ಸ್ನೇಹಿತರು,'ಕೋಟಿ ರವಿ' ಎಂಬ ಬಿರುದಾಂಕಿತರು ಮಾತ್ರ ಜೀವನ ನಡೆಸಬಹುದಷ್ಟೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಪಿಜಿ ದರ ಮತ್ತೆ 15 ರೂ ಹೆಚ್ಚಳವಾಗಿ ಸಾರ್ವತ್ರಿಕ ಏರಿಕೆ ಕಂಡಿದೆ. ಇಂತಹ ದುಬಾರಿ ದುನಿಯಾದಲ್ಲಿ ಮೋದಿಯವರ ಶ್ರೀಮಂತ ಸ್ನೇಹಿತರು,'ಕೋಟಿ ರವಿ' ಎಂಬ ಬಿರುದಾಂಕಿತರು ಮಾತ್ರ ಜೀವನ ನಡೆಸಬಹುದಷ್ಟೆ. ಆದರೆ ಜನಸಾಮಾನ್ಯ, ದುಡಿದ ಅನ್ನವನ್ನು ಬೇಯಿಸಿ ತಿನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಇದೆಂತಹ ಒಳ್ಳೆಯ ದಿನಗಳು ಬಿಜೆಪಿ ನಾಯಕರೆ? ಎಂದು ಪ್ರಶ್ನಿಸಿದ್ದಾರೆ.
"ಯುಪಿಎ ಸರ್ಕಾರವಿದ್ದಾಗ ಬಡವರ ಎಲ್ಪಿಜಿಗೆ ಸಬ್ಸಿಡಿಯಾದರೂ ಸಿಗುತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಆ ಸಬ್ಸಿಡಿಯನ್ನು ಕೂಡ ರದ್ದು ಮಾಡಿದೆ. ಈಗ ಪ್ರತಿ ಸಿಲಿಂಡರ್ಗೆ ₹1024 ಕೋಟಿ ಆದಾಯವಿರುವ ಅದಾನಿ ಕೂಡ ₹902 ಕೊಡಬೇಕು, ಮೈಮುರಿದು ದುಡಿದರೂ ನೂರು ರೂಪಾಯಿ ಗಳಿಸಲಾಗದ ಬಡವ ಕೂಡ ₹902 ಕೊಡಬೇಕು. ಬಡವ ಅದಾನಿಯಂತೆ ಬದುಕಲು ಸಾಧ್ಯವೇ?" ಎಂದು ಕೇಳಿದ್ದಾರೆ
"ಕೋಟಿ ಕುಳಗಳೆ ತುಂಬಿರುವ ಬಿಜೆಪಿಯವರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಬಹುದು. ಆದರೆ ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವವನಿಗೆ ಬೆಲೆಯೇರಿಕೆಯ ಕಷ್ಟ ಏನೆಂದು ಗೊತ್ತಿದೆ. ಈ ಸರ್ಕಾರದ ಹಣದಾಹಕ್ಕೆ ಈಗಾಗಲೇ ಬಡವನ ಬದುಕು ನಾಶವಾಗಿ ಹೋಗಿದೆ. ಈ ಸರ್ಕಾರಕ್ಕೆ ಕಾರ್ಪೊರೇಟ್ ಧಣಿಗಳ ಮೇಲಿರುವ ಪ್ರೀತಿ,ಅನುಕಂಪ ಹಾಗೂ ಮಮತೆ ಬಡವರ ಮೇಲೆ ಯಾಕಿಲ್ಲ?" ಎಂದು ಪ್ರಶ್ನಿಸಿದ್ದಾರೆ.