ಕಲಬುರ್ಗಿ, ಅ.07 (DaijiworldNews/HR): ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಜೆಡಿಎಸ್ ಪಕ್ಷದ ನಿರ್ಧಾರ. ಅದನ್ನು ಪ್ರಶ್ನಿಸಲು ಸಿದ್ದರಾಮಯ್ಯ ಯಾರು? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾರಿಗೆ ಟಿಕೆಟ್ ಕೊಡಬೇಕು. ಯಾರಿಗೆ ಕೊಡಬಾರದು ಎಂಬುದನ್ನು ಕೇಳುವ ಹಕ್ಕು ಇಲ್ಲ. ಅವರು ಯಾವ ಸೀಮೆಯ ದೊಣ್ಣೆ ನಾಯಕ ಎಂದು ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕುತ್ತಾರೆ" ಎಂದರು.
ಇನ್ನು ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಉತ್ತಮ ವಿದ್ಯಾಭ್ಯಾಸ ಪಡೆದಿದ್ದು, ಅವರನ್ನು ರಾಜಕಾರಣಕ್ಕೆ ತಂದರೆ ಸಮಾಜಕ್ಕೆ ಒಳಿತಾಗುತ್ತದೆ. ಹೀಗಾಗಿ ಟಿಕೆಟ್ ನೀಡಲಾಗಿದೆ" ಎಂದಿದ್ದಾರೆ.
"ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣ ಅಲ್ಲ. ಬದಲಾಗಿ, ಕಾಂಗ್ರೆಸ್ಸೇ ಕಾರಣವಾಗಿದೆ. 105 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಪಕ್ಷದಿಂದ ಶಾಸಕರು ಸಹಕಾರ ನೀಡಿದರೆ ಎಂಬುದನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ" ಎಂದು ಹೇಳಿದ್ದಾರೆ.