ಜಮ್ಮು, ಅ.07 (DaijiworldNews/PY): ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಭಯೋತ್ಪಾದಕರು ನಡೆಸಿದ ಪ್ರಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿದೆ.
ಸಾಂದರ್ಭಿಕ ಚಿತ್ರ
"ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಿಎಸ್ಎಫ್ ಡಿಐಎಸ್ ಎಸ್.ಪಿ.ಎಸ್ ಸಂಧು ಅವರು, "ಬಿಎಸ್ಎಫ್ ಇಂದು ಜಮ್ಮುವಿನ ಸಾಂಬಾ ಪ್ರದೇಶದ ಅಂತರಾಷ್ಟ್ರೀಯ ಗಡಿಯಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ" ಎಂದಿದ್ದಾರೆ.
"ನಾಲ್ಕು ಪಿಸ್ತೂಲ್ಗಳು, ಎಂಟು ಪಿಸ್ತೂಲ್ ಮ್ಯಾಗಜಿನ್ಗಳು, 232 ಸುತ್ತು ಗುಂಡುಗಳನ್ನು ಬಿಎಸ್ಎಫ್ ವಶಕ್ಕೆ ಪಡೆದುಕೊಂಡಿದೆ" ಎಂದು ತಿಳಿಸಿದ್ದಾರೆ.
ಕಳೆದ ಆರು ತಿಂಗಳುಗಳಿಂದ ಗಡಿಯಾಚೆಗಿನ ಭಯೋತ್ಪಾದಕರು ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಗೆ ಡ್ರೋನ್ಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.