ಶಿವಮೊಗ್ಗ, ಅ.07 (DaijiworldNews/HR): ದೇಶದಲ್ಲಿ ಆರ್ಎಸ್ಎಸ್ ಇಲ್ಲದಿದ್ದರೆ ಭಾರತವಿಂದು ಪಾಕಿಸ್ತಾನದಂತಾಗುತ್ತಿತ್ತು. ಹಿಂದುಸ್ಥಾನವು ಹಿಂದುಸ್ಥಾನವಾಗಿ ಉಳಿಯಲು ದೇಶಭಕ್ತರನ್ನು ತಯಾರಿಸುತ್ತಿರುವ ಆರ್ಎಸ್ಎಸ್ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್, ಕರ್ನಾಟಕದ ರಾಜ್ಯಪಾಲ ತ್ಯಾವರಚಂದ್ ಗೆಹ್ಲೋಟ್, ನಾನು ಎಲ್ಲರೂ ಆರ್ಎಸ್ಎಸ್ ನವರೇ. ದೇಶ, ರಾಜ್ಯದಲ್ಲಿ ಇಂದು ಆರ್ಎಸ್ಎಸ್ ನವರು ನಿಜವಾಗಿಯೂ ಆಡಳಿತ ನಡೆಸುತ್ತಿದ್ದೇವೆ ಹೊರತು ಆರ್ಎಸ್ಎಸ್ ಆಡಳಿತ ನಡೆಸುತ್ತಿಲ್ಲ" ಎಂದರು.
ಇನ್ನು ಇಡೀ ಹಿಂದು ಸಮುದಾಯ ನರೇಂದ್ರ ಮೋದಿ ಅವರ ಜೊತೆಗಿದ್ದು, ದೇಶಭಕ್ತ ಮುಸ್ಲಿಮರು ಬಿಜೆಪಿ ಜೊತೆಗೆ ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮುಸ್ಲಿಮರನ್ನು ಸಂತೃಪ್ತಗೊಳಿಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಗಾಗ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ಮಾತನಾಡುತ್ತಾರೆ" ಎಂದಿದ್ದಾರೆ.
ವಿಪಕ್ಷಗಳು ಆರ್ಎಸ್ಎಸ್ ಟೀಕೆ ಮಾಡಿದರೆ ಮಹಾತ್ಮ ಗಾಂಧಿಯವರನ್ನೇ ಅಪಮಾನ ಮಾಡಿದಂತೆ. ಆರ್ ಎಸ್ಎಸ್ ಎಲ್ಲರಿಗೂ ಸಂಸ್ಕಾರ ನೀಡುತ್ತಿದೆ. ಶಿಕ್ಷಣ ನೀಡುತ್ತಿದೆ. ಆರ್ ಎಸ್ಎಸ್ ನಲ್ಲಿ ತಯಾರಾದವರು ದೇಶವನ್ನು ಸಂರಕ್ಷಣೆ ಮಾಡುತ್ತಾರೆ" ಎಂದು ಹೇಳಿದ್ದಾರೆ.