ಮಲಪ್ಪುರಂ, ಅ 08 (DaijiworldNews/MS): ಮಗಳಿಗೆ ಅಳಿಯ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಸಹಿಸಲಾಗದೇ ಹಾಗೂ ಆತನ ಧನದಾಹವನ್ನು ತೀರಿಸಲಾಗದೇ ಕೇರಳ ವ್ಯಕ್ತಿಯೊಬ್ಬರು ನೊಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮಲಪ್ಪುರಂ ಜಿಲ್ಲೆಯ ಮಂಪಾಡ್ ನ ರಬ್ಬರ್ ಟ್ಯಾಪಿಂಗ್ ಕೆಲಸಗಾರ ಮೂಸಕುಟ್ಟಿ(46 ) ಸೆ.23 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತೀಚೆಗೆ ಇವರ ಕುಟುಂಬ ಸದಸ್ಯರು ಅವರ ಫೋನಿನಲ್ಲಿ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ ವಿಡಿಯೋವನ್ನು ಪತ್ತೆ ಹಚ್ಚಿದ್ದಾರೆ.
ಹೃದಯ ವಿದ್ರಾವಕ ವಿಡಿಯೋದಲ್ಲಿ" 20 ವರ್ಷದ ಮಗಳು ಹಿಬಾ ತನ್ನ ಗಂಡನ ಮನೆಯಲ್ಲಿ ಹೇಗೆ ಕಿರುಕುಳಕ್ಕೊಳಗಾದಳು ಮತ್ತು ಹೇಗೆ ಪೀಡಿಸಲ್ಪಟ್ಟಳು ಎಂಬುದರ ಕುರಿತು ಎಳೆ ಎಳೆಯಾಗಿ ಮೂಸಕುಟ್ಟಿ ವಿವರಿಸಿದ್ದಾರೆ .
ಹಿಬಾ ಮತ್ತು ಆಕೆಯ ನವಜಾತ ಶಿಶು ಮೂಸಾಕುಟ್ಟಿಯೊಂದಿಗೆ ಕೆಲವು ತಿಂಗಳುಗಳಿಂದ ವಾಸಿಸುತ್ತಿದ್ದು, ಹಿಬಾ ಅವರ ಪತಿ ಹಮೀದ್ ಆಕೆಯನ್ನು ಮರಳಿ ಮನೆಗೆ ಸೇರಿಸಿರಲಿಲ್ಲ. ವೀಡಿಯೊದಲ್ಲಿ ಮೂಸಕುಟ್ಟಿ ಹಲವಾರು ಅಸಹಾಯಕತೆ ವ್ಯಕ್ತಪಡಿಸಿದ್ದು, ತನ್ನ ಮಗಳ ಸ್ಥಿತಿಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ತನ್ನ ಅಳಿಯನು ಮತ್ತಷ್ಟು ವರದಕ್ಷಿಣೆಗಾಗಿ ಮಗಳನ್ನು ಪೀಡಿಸುತ್ತಿದ್ದಾನೆ. ಮದುವೆಯ ಸಮಯದಲ್ಲಿ ತಾನು 18 ಸವರನ್ ಹಾಗೂ ಆ ಬಳಿಕ ಮತ್ತೆ ಆರು ಸವರನ್ ಗೂ ಹೆಚ್ಚು ಚಿನ್ನ ನೀಡಿದ್ದೇನೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.
ಹಿಬಾ ಕೂಡ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಗಂಡನ ಮನೆಯಲ್ಲಿ ತಾನು ಸಾಕಷ್ಟು ಚಿತ್ರಹಿಂಸೆ ಅನುಭವಿಸಿದ್ದು ಪತಿ ಚಿನ್ನ ಮತ್ತು ಹಣದಲ್ಲಿ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ವರದಕ್ಷಿಣೆಗಾಗಿ ದೈಹಿಕ ಹಲ್ಲೆ ನಡೆಸಿದ್ದು ರಾತ್ರಿ ನಿದ್ರಿಸಲು ಬಿಡುತ್ತಿರಲಿಲ್ಲ. ಸೂಜಿಯಲ್ಲಿ ಚುಚ್ಚಿ ಹಲ್ಲೆ ನಡೆಸುತ್ತಿದ್ದ ಎಂದು ದೂರಿದ್ದಾರೆ.
ನನ್ನ ಮದುವೆ ನನ್ನ ತಂದೆಯ ಕನಸಾಗಿದ್ದರಿಂದ ಈ ಮದುವೆಯನ್ನು ಚೆನ್ನಾಗಿ ನಡೆಸಿಕೊಟ್ಟರು. ಹೀಗಾಗಿ ಪತಿ ಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಆರಂಭದಲ್ಲಿ ಏನನ್ನೂ ಹೇಳಲಿಲ್ಲ. ಆದರೆ ಪ್ರತಿದಿನ, ಪತಿ ಹಮೀದ್ ನನ್ನನ್ನು ಹಿಂಸಿಸಿ ಹಲ್ಲೆ ನಡೆಸಿ ಹೆಚ್ಚೆಚ್ಚು ಚಿನ್ನ ತರುವಂತೆ ಪೀಡಿಸುತ್ತಿದ್ದರು ಎಂದು " ಎಂದು ವಿವರಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821