ಬೆಂಗಳೂರು, ಅ.07 (DaijiworldNews/HR): "ಕುಮಾರಸ್ವಾಮಿ ಅವರಿಗೆ ಇನ್ನೂ ಆರ್ಎಸ್ಎಸ್ ಸಂಘದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಕೇಳಬೇಕು. ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್ಎಸ್ಎಸ್ ಅನ್ನು ನೋಡಬೇಡಿ. ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ಧಾಂತ ಒಪ್ಪಿದರೆ ಆರ್ಎಸ್ಎಸ್ ನಿಮ್ಮನ್ನು ಸ್ವಾಗತಿಸುತ್ತದೆ" ಎಂದು ಬಿಜೆಪಿ ರಾಜಕೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಆರ್ಎಸ್ಎಸ್ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅವರ ಪುತ್ರರಾದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾತ್ರ ಸಂಘದ ಸಿದ್ಧಾಂತಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ" ಎಂದರು.
"ಆರ್ಎಸ್ಎಸ್ನಲ್ಲಿ ವ್ಯಕ್ತಿ ನಿರ್ಮಾಣದ ಜೊತೆ ರಾಷ್ಟ್ರ ನಿರ್ಮಾಣದ ಧ್ಯೇಯ ಇರುವ ಕಾರಣ ಇಂದು ನಮ್ಮ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಘದ ಸ್ವಯಂ ಸೇವಕರು. ಉನ್ಮತ ಮಟ್ಟದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಶೂನ್ಯಮಟ್ಟಕ್ಕೆ ತಂದಿದ್ದಾರೆ" ಎಂದಿದ್ದಾರೆ.
"ಸ್ವಜನಪಕ್ಷಪಾತ, ಕುಟುಂಬ ರಾಜಕಾರಣವನ್ನು ಸರ್ವಸ್ವ, ಸ್ವಾರ್ಥವನ್ನು ಹಕ್ಕೆಂದು ಭಾವಿಸಿರುವವರಿಗೆ ಸಂಘದ ಸಿದ್ದಾಂತಗಳು ಅರ್ಥವಾಗುವುದಿಲ್ಲ. ಆರ್ಎಸ್ಎಸ್ನ ನಿಷ್ಠೆ, ದೇಶ ಭಕ್ತಿ, ಸಂಕಷ್ಟದಲ್ಲಿರುವ ಜನರಿಗೆ ನಿಸ್ವಾರ್ಥ ಸೇವಾ ಮನೋಭಾವ ಹೆಚ್ಡಿಕೆ ಅವರಿಗೆ ಅರ್ಥವಾಗುವುದಿಲ್ಲ ಬಿಡಿ" ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು "1977ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಅಂದಿನ ಸರಸಂಘಚಾಲಕರಾದ ಬಾಳಾಸಾಹೇಬ್ ದೇವರಸ್, ಕೆ.ಎಸ್. ಹೆಗ್ಡೆ, ಡಾ.ಜಾನ್ ಜೊತೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕುಳಿತಿದ್ದಾರೆ, ಪೋಟೋ ನೋಡಿ. ಅಂದರೆ ದೇವೇಗೌಡರಿಗೆ ಆರ್ಎಸ್ಎಸ್ ಸಿದ್ಧಾಂತದಲ್ಲಿ ನಂಬಿಕೆಯಿದೆ ಎಂದು ಅರ್ಥವಲ್ಲವೇ ಕುಮಾರಸ್ವಾಮಿ" ಎಂದು ಪ್ರಶ್ನಿಸಿದ್ದಾರೆ.