ತುಮಕೂರು, ಅ.07 (DaijiworldNews/PY): "ಬಿಜೆಪಿಯದ್ದು ದೀಪ ಹಚ್ಚುವ ಸಂಸ್ಕೃತಿ, ಕಾಂಗ್ರೆಸ್ನದ್ದು ಕೊಳ್ಳಿ ಇಡುವ ಸಂಸ್ಕೃತಿ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರದ ಅವಧಿಯಲ್ಲಿ ಈವರೆಗೆ ಒಂದೇ ಒಂದು ಕೋಮುಗಲಭೆ ನಡೆದಿಲ್ಲ. ಕುರ್ಚಿಗೋಸ್ಕರ ಬೆಂಕಿ ಹಚ್ಚಿದವರು ಕಾಂಗ್ರೆಸ್ಸಿಗರು" ಎಂದು ವಾಗ್ದಾಳಿ ನಡೆಸಿದ್ದಾರೆ.
"ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಆರ್ಎಸ್ಎಸ್ ಕುರಿತು ಏನೇನೋ ಹೇಳಿಕೆ ನೀಡುತ್ತಿದ್ದು, ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ. ನೀವು ತಾಲಿಬಾನಿಗಳು. ನಿಮ್ಮ ಭಾಷೆ, ನಿಮ್ಮ ನಡವಳಿಕೆಗಳಿಗೆ ದೇಶದ ಜನರೇ ತಕ್ಕ ಪಾಠ ಕಲಿಸುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶದಲ್ಲಿ ಎಲ್ಲೇ ವಿಪತ್ತ, ಆಪತ್ತು ಬಂದರೂ ಕೂಡಾ ಮುಂದೆ ಬರುವುದೇ ಸಂಘ ಪರಿವಾರ. ಕುಮಾರಸ್ವಾಮಿ ಅವರು ಆಕಸ್ಮಿಕವಾಗಿ ಎರಡು ಬಾರಿ ಸಿಎಂ ಆದವರು. ಈಗ ಅವರಿಗೆ ಅಧಿಕಾರ ಇಲ್ಲ. ಅವರು ಹತಾಶಾ ಮನೋಭಾವದಿಂದ ಮಾತನಾಡುತ್ತಿದ್ದು, ಅವರಿಗೆ ಬುದ್ದಿ ಭ್ರಮಣೆಯಾಗಿದೆ" ಎಂದಿದ್ದಾರೆ.