ಹುಬ್ಬಳ್ಳಿ, ಅ.07 (DaijiworldNews/PY): "ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಇಂಜಿನ್ ಇದ್ದರೂ ಅವರು ಅಭಿವೃದ್ದಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗರ ಯಾವುದೇ ಮಾತುಗಳಲ್ಲಿ ನನಗೆ ನಂಬಿಕೆ ಇಲ್ಲ. ರಾಜಕಾರಣದಲ್ಲಿ ಏನೂ ಬೇಕಾದರೂ ಆಗುವ ಸಾಧ್ಯತೆ ಇದೆ. ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಉಪಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದು, ಇದು ಅವರ ರಾಜಕೀಯ ತಂತ್ರವಾಗಿದೆ. ಆ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ" ಎಂದಿದ್ದಾರೆ.
"ಮುಂದಿನ ಎಲ್ಲಾ ಚುನಾವಣಗೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ. ಉಪಚುನಾವಣೆ ಎನ್ನುವುದು ಜನರಿಗೆ ತಮ್ಮ ನೋವು ಹೇಳಿಕೊಳ್ಳು ಇರುವ ಅವಕಾಶ" ಎಂದು ತಿಳಿಸಿದ್ದಾರೆ.
"ಆಡಳಿತ ಯಂತ್ರ ಬಿಗಿಯಾಗಿದ್ದು, ಈ ಬಗ್ಗೆ ಬಿಜೆಪಿಗರಿಗೆ ಚೆನ್ನಾಗಿ ತಿಳಿದಿದೆ. ಅವರು ಯಾವುದೇ ರೀತಿಯಲ್ಲಿ ಆಡಳಿತವನ್ನು ದುರುಪಯೋಗ ಮಾಡಿಕೊಂಡರೂ ಕೂಡಾ ಮತದಾರರ ತೀರ್ಪು ಅಂತಿಮವಾಗಿದೆ" ಎಂದಿದ್ದಾರೆ.
"ಜಾತ್ಯಾತೀತ ತತ್ವಗಳು ಒಂದೇ ಆಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ಈ ಹಿಂದೆ ಬೆಂಬಲ ನೀಡಿದ್ದೆವು. ಬಿಜೆಪಿ ಸರ್ಕಾರದಿಂದ ರಾಜ್ಯದ ಜನರಿಗೆ ಒಳ್ಳೆಯದಾಗುವುದಿಲ್ಲ" ಎಂದು ಹೇಳಿದ್ದಾರೆ.