ಬೆಂಗಳೂರು, ಅ.07 (DaijiworldNews/PY): ಬೇಗೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ನಗರದ ಮನೆಯೊಂದರಲ್ಲಿ ತಾಯಿ-ಮಗಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತರನ್ನು ಯಮುನಾ ಅಲಿಯಾಸ್ ಚಂದ್ರಕಲಾ (40) ರಾತನ್ಯ (3) ಎಂದು ಗುರುತಿಸಲಾಗಿದೆ. ಸಂಬಂಧಿಕರು ಮನೆಗೆ ಬಂದ ಸಂದರ್ಭ ಘಟನ ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ತಾಯಿ ಹಾಗೂ ಮಗುವಿನ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಾಯಿಯ ಮೃತದೇಹ ಮನೆಯ ಹಾಲ್ನಲ್ಲಿ ಬಿದ್ದಿದ್ದರೆ, ಮಗಳ ಮೃತದೇಹ ರೂಮ್ನಲ್ಲಿ ಪತ್ತೆಯಾಗಿದೆ.
ಇವರು ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿ ನಿವಾಸಿಗಳಾಗಿದ್ದಾರೆ. ಚಂದ್ರಕಲಾ ಅವರ ಕುಟುಂಬ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿತ್ತು. ಚಂದ್ರಕಲಾ ಅವರ ಪತಿ ಚೆನ್ನವೀರ ಸ್ವಾಮಿ ಗಾರ್ಮೆಂಟ್ಸ್ ನೌಕರನಾಗಿದ್ದಾರೆ.
ಚಂದ್ರಕಲಾ ಅವರು ಮನೆಯಲ್ಲಿಯೇ ಇರುತ್ತಿದ್ದು, ಆಯುರ್ವೇದಿಕ್ ವಸ್ತುಗಳ ಆನ್ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾಎ, ಚಂದ್ರಕಲಾ ಅವರ ಪತಿ ಚನ್ನವೀರಸ್ವಾಮಿ ಅವರು ಬೆಳಗ್ಗೆ ಕೆಲಸಕ್ಕೆ ಹೋದ ಬಳಿಕ ಅಪರಿಚಿತರು ಮನೆಗೆ ಪ್ರವೇಶಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಅಪರಿಚಿತ ಮನೆಯಿಂದ ತೆರಳಿದ್ದಾನೆ. ಮನೆಗೆ ಬಂದ ಅಪರಿಚಿತ ವ್ಯಕ್ತಿಯಿಂದಲೇ ಹತ್ಯೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
"ಚಂದ್ರಕಲಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಒಬ್ಬರನ್ನು ಹಾಸ್ಟೆಲ್ಗೆ ಕಳುಹಿಸಲಾಗಿತ್ತು. ದುಷ್ಕರ್ಮಿಗಳು ಚಂದ್ರಕಲಾ ಹಾಗೂ ಆಕೆಯ ಮಗಳಿಗೆ 20 ಬಾರಿ ಚೂರಿಯಿಂದ ಇರಿಯಲಾಗಿದೆ. ಚಂದ್ರಕಲಾ ಅವರಿಗೆ ಪರಿಚಯವಿರಿವ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಅಪರಿಚಿತ ವ್ಯಕ್ತಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳ್ನನು ರಚಿಸಲಾಗಿದೆ. ತಂಡಗಳು ಈಗಾಗಲೇ ತಮ್ಮ ಕೆಲಸವನ್ನು ಆರಂಭಿಸಿವೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ" ಎಂದು ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.