ಬೆಂಗಳೂರು, ಅ.06 (DaijiworldNews/PY): ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಸರ್ಕಾರಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಕೊರೊನಾ ಅಪಾಯ ಭತ್ಯೆ ಬೇಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ಥಾನಿಕ ವೈದ್ಯರು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿರುವ ಕಾರಣ ಒಪಿಡಿ ಸೇವೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ವೈದ್ಯಕೀಯ ಸಂಘಟನೆ ಮಾಹಿತಿ ನೀಡಿದ್ದು, "ತುರ್ತು ಸೇವೆ ಸೇರಿದಂತೆ ಕೊರೊನಾ ಸೇವೆ, ನಿಗಾ ಘಟಕ ಸೇವೆ ಎಂದಿನಂತೆ ಇರಲಿದೆ" ಎಂದು ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರವು, ನಮ್ಮ ಸೇವೆಗೆ ಕೊರೊನಾ ಅಪಾಯ ಭತ್ಯೆ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆ ನಾವು ನಾಳೆ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸಂಘದ ಮುಖಂಡ ತಿಳಿಸಿದ್ದಾರೆ.
"ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಸೀಟ್ ಪಡೆದವರಿಗೆ ಶುಲ್ಕ ಪರಿಷ್ಕರಣೆಯಿಂದ ತಾರತಮ್ಯವಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ನಮ್ಮಲ್ಲಿ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ. ಕೊರೊನಾ ವೇಳೆ ಶ್ರಮಿಸಿದ ಸ್ಥಾನಿಕ ವೈದ್ಯರ ಸೇವೆಯನ್ನು ಪರಿಗಣಿಸಿ ಶೈಕ್ಷಣಿಕ ಶುಲ್ಕವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ" ಎಂದಿದ್ದಾರೆ.