ನವದೆಹಲಿ, ಅ.06 (DaijiworldNews/PY): "ರೈತರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕೆ ಅಷ್ಟೊಂದು ದ್ವೇಷ?" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಲಖಿಂಪುರ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಕೇಂದ್ರ ಸಚಿವರ ಪುತ್ರ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪ ಇದೆ. ಆಪಾದಿತ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರ ಅವರನ್ನು ಪ್ರಧಾನಿ ಮೋದಿ ಅವರು ಕೂಡಲೇ ಸಂಪುಟದಿಂದ ವಜಾ ಮಾಡಬೇಕು" ಎಂದಿದ್ದಾರೆ.
"ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 600ಕ್ಕೂ ಅಧೀಕ ಮಂದಿ ರೈತರು ಮೃತಪಟ್ಟಿದ್ದಾರೆ. ಪ್ರತಿಭಟನಾನಿರತ ರೈತರನ್ನು ವಾಹನ ಹರಿಸಿ ಹತ್ಯೆ ಮಾಡಲಾಗಿದೆ. ರೈತರ ಮೇಲೆ ಪ್ರಧಾನಿ ಮೋದಿ ಅವರಿಗೆ ಏಕೆ ಇಷ್ಟು ದ್ವೇಷ? "ಎಂದು ಕೇಳಿದ್ದಾರೆ.
"ಸಾವನ್ನಪ್ಪಿರುವ ರೈತರ ಮನೆಗಳಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಬೇಕು. ರೈತರಿಗೆ ನ್ಯಾಯ ದೊರಕುವುದನ್ನು ಇಡೀ ದೇಶವೇ ನೋಡುತ್ತಿದೆ. ತೀರ್ಮಾನ ಪ್ರಧಾನಿಯವರ ಕೈಯಲ್ಲಿದೆ" ಎಂದಿದ್ದಾರೆ.