ಬೆಂಗಳೂರು, ಅ 06 (DaijiworldNews/MS): ವರ್ಷಗಳ ಅಚ್ಛೇದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರ , ಅರೆಸ್ಸೆಸ್ ಹಾಗೂ ಬೆಲೆ ಏರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿದ ಅವರು," ಇಂದಿನ ಬೆಳಗಿನ ಶಾಕ್! 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 15 ರೂ. ಹೆಚ್ಚಳ. ಈ ಸಿಲಿಂಡರ್ ಬೆಲೆ ಈಗ 900 ರೂ. ಗಡಿಯಲ್ಲಿದೆ. 7 ವರ್ಷಗಳ ಅಚ್ಛೇದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ . ಕೋವಿಡ್, ಬೆಲೆ ಏರಿಕೆಯಿಂದ ಜನಜೀವನ ಹಳ್ಳಹಿಡಿದು ಹೋಗಿದೆ. ಬಡ ಭಾರತದ ಜೀವ ಹಿಂಡುತ್ತಿರುವ ಶ್ರೀಮಂತ ಭಾರತದ ಸಾರಥ್ಯ ವಹಿಸಿರುವವರು ಒಂದಿಬ್ಬರು ಉದ್ಯಮಗಳ ಜೋಳಿಗೆ ತುಂಬಿ ಜನರ ಬಾಳಿಗೆ ಕೊಳ್ಳಿ ಇಡುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅನಿಯಂತ್ರಿತ ಬೆಲೆ ಏರಿಕೆ ಮಾಪಿಯಾ ಹಿಂದೆ ಇರುವ ಶಕ್ತಿಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ" ಎಂದು ಒತ್ತಾಯಿಸಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅನ್ನಕ್ಕಾಗಿ ಹಾಹಾಕಾರವಿದೆ. ಸೇವೆ ಎಂದು ಸೋಗಲಾಡಿತನ ತೋರಿಸುವ ಅರೆಸ್ಸೆಸ್ ಬೆಲೆ ಏರಿಕೆ ಬಗ್ಗೆ ಮಾತನಾಡಬೇಕು. ಬಡವರ ಭಾರತ, ಶ್ರೀಮಂತರ ಭಾರತದ ಬಗ್ಗೆ ಹೇಳಬೇಕು. ಅದಕ್ಕೆ ಕಾರಣವಾದ 7 ವರ್ಷಗಳ ಆಡಳಿತದ ಬಗ್ಗೆ ದನಿಯೆತ್ತಬೇಕು. ಇಲ್ಲವಾದರೆ ಬಡವರ ಭಾರತದ ಆಕ್ರೋಶಕ್ಕೆ ನೀವು ತುತ್ತಾಗುವುದು ತಪ್ಪುವುದಿಲ್ಲ.