ನವದೆಹಲಿ, ಅ 06 (DaijiworldNews/MS): ಲಖಿಂಪುರ ದುರ್ಘಟನಾ ಸ್ಥಳಕ್ಕೆ ತೆರಳುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಹುಲ್ಗಾಂಧಿ 'ಮುಖ್ಯಮಂತ್ರಿಗಳಾದ ಛತ್ತೀಸ್ ಗಢ ಸಿಎಂ ಭೂಪೇಶ್ ಬಗೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ' ಸೇರಿ ಮೂವರು ಜೊತೆಯಾಗಿ ಲಖಿಂಪುರ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರನ್ನು ಭೇಟಿ ನೀಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಯೋಗಿ ನೇತೃತ್ವದ ಬಿಜೆಪಿ ಯೋಗಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ನಮ್ಮ ಪಕ್ಷದ ಇಬ್ಬರು ಮುಖ್ಯಮಂತ್ರಿಗಳ ಜೊತೆಯಲ್ಲಿ ನಾನು ಲಖಿಂಪುರಕ್ಕೆ ಭೇಟಿ ನೀಡುತ್ತಿದ್ದೇನೆ. ಉತ್ತರ ಪ್ರದೇಶ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿ ನಾಲ್ಕು ಮಂದಿಗಿಂತ ಹೆಚ್ಚಿನ ಜನ ಸೇರ ಬಾರದು ಎಂದು ಆದೇಶ ಹೊರಡಿಸಿದೆ. ಹಾಗಾಗಿ ನಾವು ಮೂರು ಜನ ಮಾತ್ರ ಅಲ್ಲಿಗೆ ಹೋಗ ಬಯಸಿದ್ದೇವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಸರ್ವಾಧಿಕಾರ ಪರಿಸ್ಥಿತಿಯಿದ್ದು, ರೈತರ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ, ಬಿಜೆಪಿ ಸರ್ಕಾರಗಳ ಸಚಿವರು ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರೈತರ ಮೇಲೆ ಕಾರು ಹತ್ತಿಸಿದವರನ್ನು ಬಂಧಿಸುವುದಿಲ್ಲ. ಬದಲಾಗಿ ಅಲ್ಲಿಗೆ ಭೇಟಿ ನೀಡಲು ಹೋಗುವವರನ್ನು ಬಂಧಿಸಲಾಗುತ್ತಿದೆ. ರೈತರನ್ನು ಕ್ರಿಮಿನಲ್ಗಳು ಎಂದು ಕರೆಯಲಾಗಿದೆ. ನಾವು ರೈತರ ಜೊತೆ ನಿಲ್ಲ ಬಯಸುತ್ತೇವೆ. ಅದಕ್ಕಾಗಿ ಅಲ್ಲಿಗೆ ಭೇಟಿ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಲಕ್ನೊ ಪೊಲೀಸ್ ಆಯುಕ್ತ ಡಿ ಕೆ ಠಾಕೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, " ನಿಷೇಧಾಜ್ಞೆ ಜಾರಿಯಲ್ಲಿದ್ದು, ರಾಹುಲ್ ಗಾಂಧಿಯವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿಲ್ಲ ಹೀಗಾಗಿ ಅವರು ಲಖಿಂಪುರ್ ಅಥವಾ ಸೀತಾಪುರ್ ಗೆ ಹೋಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.