ಬೆಂಗಳೂರು, ಅ.06 (DaijiworldNews/PY): ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಕುರಿತು ನೀಡಿರುವ ಹೇಳಿಕೆ ಸಂಬಂಧ ಸಚಿವ ಪ್ರಭು ಚೌಹಾಣ್ ತಿರುಗೇಟು ನೀಡಿದ್ದು, "ಆರ್ಎಸ್ಎಸ್ ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು" ಎಂದಿದ್ದಾರೆ.
"ಆರ್ಎಸ್ ಎಸ್ ಇಲ್ಲದೇ ಇರುತ್ತಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್ನವರೇ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರಿಗೆ ಇದನ್ನು ಸಹಿಸಲ ಆಗುತ್ತಿಲ್ಲ. ಹಾಗಾಗಿ ಅವರು ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಆರ್ಎಸ್ಎಸ್ ದೇಶಭಕ್ತಿಯ ಸಂಸ್ಥೆ, ದೇಶದ ಪರ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ಇರುವುದರಿಂದ ದೇಶ ಇದೆ. ಮಾಜಿ ಸಿಎಂ ಹೇಗೆ ಮಾತನಾಡಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಜನರಿಗೆ ಆರ್ಎಸ್ಎಸ್ ಏನು ಎನ್ನುವುದರ ಬಗ್ಗೆ ತಿಳಿದಿದೆ. ನಾನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ" ಎಂದಿದ್ದಾರೆ.
"ಮೋದಿ ಆರ್ಎಸ್ಎಸ್ ಕೀಲುಗೊಂಬೆ, ಬಿಜೆಪಿ ಪಕ್ಷವೂ ಆರ್ಎಸ್ಎಸ್ ಅನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರೆಸೆಸ್ಸ್ ಸಂಘದಲ್ಲಿ ಚರ್ಚೆ ಆಗುವುದಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ" ಎಂದು ಹೆಚ್ಡಿಕೆ ಆರೋಪ ಮಾಡಿದ್ದರು.