ಶಿವಮೊಗ್ಗ, ಅ 06 (DaijiworldNews/MS): ಮೋದಿ ಆರೆಸೆಸ್ಸ್ ಕೀಲುಗೊಂಬೆ, ತನ್ನ ತಂತ್ರಗಳ ಪೂರ್ಣಗೊಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ವ್ಯಂಗ್ಯಭರಿತವಾಗಿ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ "ಸಂಘದ ಬಗ್ಗೆ ಸ್ಪಷ್ಟ ಜ್ಞಾನ ಇಲ್ಲದವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಕುಮಾರಸ್ವಾಮಿಗೆ ಅವರಿಗೆ ಅರೆಸ್ಸೆಸ್ ಬಗ್ಗೆ ಗೊತ್ತಾಗಬೇಕಾದರೆ ಮೊದಲು ಸಂಘದ ಶಾಖೆಗೆ ಬಂದು ಶಿಕ್ಷಣ ಪಡೆಯಲಿ, ಇದರಿಂದ ಅವರಿಗೂ ಒಳಿತಾಗುತ್ತದೆ" ಎಂದಿದ್ದಾರೆ.
ಬುಧವಾರ ರಾಮನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಕುಮಾರಸ್ವಾಮಿ ಮಾತನಾಡಿ " ಮೋದಿ ಆರೆಸೆಸ್ಸ್ ಕೀಲುಗೊಂಬೆ, ಬಿಜೆಪಿ ಪಕ್ಷವೂ ಆರೆಸೆಸ್ಸ್ ನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರೆಸೆಸ್ಸ್ ಸಂಘದಲ್ಲಿ ಚರ್ಚೆ ಆಗುವುದಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ " ಎಂದು ಆರೋಪ ಮಾಡಿದ್ದರು.
ಇದಕ್ಕೆ ತಿರುಗೆಟು ನೀಡಿರುವ ನಳಿನ್, " ಎಚ್ ಡಿ ಕೆ ಅಧಿಕಾರದಲ್ಲಿ ಇದ್ದಾಗ ಜಾತಿವಾದದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವರು ಕುಟುಂಬ ರಾಜಕಾರಣ ಮಾಡಿದರು. ಕುಟುಂಬದವರಿಗೆ ಎಲ್ಲ ಅಧಿಕಾರ ಕೊಟ್ಟವರು. ಇಂತಹವರಿಂದ ಬೇರೆ ನಿರೀಕ್ಷೆ ಮಾಡಲು ಸಾಧ್ಯವೇ? ಸಂಘದ ಶಿಕ್ಷಣ ಪಡೆದವರು ಐಎಎಸ್, ಐಪಿಎಸ್ ಅಧಿಕಾರಿಯಾದರೆ ನಾವು ಸಂತೋಷ ಪಡುತ್ತೇವೆ. ಅವರಿಂದಾಗಿ ದೇಶಕ್ಕೆ ಇನ್ನಷ್ಟು ಒಳ್ಳೆಯದು ಆಗುತ್ತದೆ" ಎಂದು ಹೇಳಿದರು.
ಈ ಸಂದರ್ಭ ಮತಾಂತರ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ಹೆಚ್ಚಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದೆ. ಹೀಗಾಗಿ ಖಂಡಿತವಾಗಿ ಇದಕ್ಕೆ ಕಠಿಣ ಕಾನೂನು ತರಬೇಕು. ಕಾಯ್ದೆ ಮೂಲಕ ಮತಾಂತರ ಮಾಡುವವರಿಗೆ ಕಠಿಣವಾದ ಶಿಕ್ಷೆ ಆಗಬೇಕು. ಎಲ್ಲೆಲ್ಲಿ ಮತಾಂತರ ಚಟುವಟಿಕೆ ಕೇಂದ್ರಗಳಿವೋ ಅವುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಎಂದು ಹೇಳಿದರು