ಬೆಂಗಳೂರು, ಅ 06 (DaijiworldNews/MS): 'ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ ' ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ’ತನ್ನ ತಂತ್ರಗಳ ಪೂರ್ಣಗೊಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ " ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲೆಂದು ಈ ಮಾತು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು" ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಕೊರೋನಾ ಲಾಕ್ ಡೌನ್ ವೇಳೆಯಲ್ಲಿ ಪುಸ್ತಕ ಓದಿದ್ದೆ. ಹಲವಾರು ಲೇಖಕರು ಬರೆದ ಮಹತ್ವದ ಪುಸ್ತಕಗಳನ್ನು ಓದಿದೆ. ಇತಿಹಾಸದ ಕೆಲ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿದೆ. ಆ ಪುಸ್ತಕಗಳಲ್ಲಿರುವ ಕೆಲ ಅಂಶಗಳನ್ನಷ್ಟೆ ನಾನು ಹೇಳಿದ್ದೇನೆಂದು ಹೇಳಿದ್ದಾರೆ.
ವಾಸ್ತವವಾಗಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಈ ಬಗ್ಗೆ ಜನರಿಗೆ ಅರ್ಥವಾಗುತ್ತಿಲ್ಲ. ಸತ್ಯ ಮುಚ್ಚಿಟ್ಟರೆ ತಮ್ಮ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರಿಗೆ ಅಪಚಾರ ಮಾಡಿದಂತೆ ಆಗುತ್ತದೆ. ಯಾವತ್ತಿದ್ದರೂ ಜನರಿಗೆ ಸತ್ಯ ಗೊತ್ತಾಗಲೇಬೇಕು. ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ. ನನ್ನ ಹೇಳಿಕೆ ಯಾರ ಪರವೂ ಇಲ್ಲ ಅಥವಾ ವಿರೋಧವೂ ಇಲ್ಲ. ಸತ್ಯ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ. ನಾನು ಸತ್ಯದ ಪರ ಎಂದು ಬರೆದುಕೊಂಡಿದ್ದಾರೆ.
ಮೋದಿ ಆರೆಸೆಸ್ಸ್ ಕೀಲುಗೊಂಬೆ, ಬಿಜೆಪಿ ಪಕ್ಷವೂ ಆರೆಸೆಸ್ಸ್ ನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರೆಸೆಸ್ಸ್ ಸಂಘದಲ್ಲಿ ಚರ್ಚೆ ಆಗುವುದಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಆರೋಪ ಮಾಡಿದ್ದರು.