ನವದೆಹಲಿ, ಅ.06 (DaijiworldNews/PY): ಹಿಂಸಾಚಾರಪೀಡಿತ ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೆ ಉತ್ತರಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಅಲ್ಲಿ ಸೆಕ್ಷನ್ 144 ಹೇರಿರುವ ಕಾರಣ ಭೇಟಿಗೆ ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಅವರು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೆ ಈ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದರು. ಆದರೆ, ಅನುಮತಿ ನಿರಾಕರಿಸಲಾಗಿದೆ.
ಈಗಾಗಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದು ಸರ್ಕಾರಿ ಗೆಸ್ಟ್ಹೌಸ್ನಲ್ಲಿ ಗೃಹಬಂಧನದಲ್ಲಿರಿಸಿದ್ದಾರೆ.
ಕಾಂಗ್ರೆಸ್ ನಾಯಕರುಗಳಾದ ಚರಂಜಿತ್ ಸಿಂಗ್ ಚನ್ನಿ, ಭೂಪೇಶ್ ಬಾಗೇಲ್ ಹಾಗೂ ಕೆ ಸಿ ವೇಣುಗೋಪಾಲ್, ಸಚಿನ್ ಪೈಲಟ್ ಸೇರಿದಂತೆ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಮಂಗಳವಾರ ಬೆಳಗ್ಗೆ ಲಖಿಂಪುರ್ ಖೇರಿಯತ್ತ ಹೊರಡಬೇಕಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ.
ಭಾನುವಾರ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರು ಲಖಿಂಪುರ್ ಖೇರಿಯಲ್ಲಿ ತಮ್ಮ ವಾಹನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಕಾರು ಹತ್ತಿಸಿದ ಪರಿಣಾಮ ನಾಲ್ವರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಮಾತ್ರವಲ್ಲದೇ ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಸೇರಿದಂತೆ ಮುಂತಾದ ಪಕ್ಷಗಳನ್ನು ಕೂಡಾ ಉತ್ತರಪ್ರದೇಶ ಸರ್ಕಾಋ ಲಖಿಂಪುರ್ ಖೇರಿಗೆ ಹೋಗದಂತೆ ತಡೆಯಲಾಗಿದೆ.