ಹುಬ್ಬಳ್ಳಿ, ಅ.06 (DaijiworldNews/PY): "ಪ್ರೌಢಶಾಲಾ ಹಂತದಿಂದಲೇ ತಾಂತ್ರಿಕ ಶಿಕ್ಷಣ ಸಿಗುವಂತಾಗಬೇಕು. ಆ ಸಲುವಾಗಿ ತಾಂತ್ರಿಕ ಶಿಕ್ಷಣ ಆಧಾರಿತ ಶಾಲೆಗಳನ್ನು ಪ್ರಾರಂಭಿಸಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬಿಯಾಂಡ್ ಬೆಂಗಳೂರು ಇನ್ನೋವೇಷನ್ ಆ್ಯಂಡ್ ಇಂಪ್ಯಾಕ್ಟ್ ಹುಬ್ಬಳ್ಳಿ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದ ಅವರು, "ಹುಬ್ಬಳ್ಳಿಯಲ್ಲಿ 1960ರಲ್ಲಿಯೇ ತಾಂತ್ರಿಕ ಶಿಕ್ಷಣ ನೀಡುವ ಪ್ರೌಢಶಾಲೆ ಇತ್ತು. ಮುಂದೆ ಅದು ಬಂದ್ ಆಯಿತು. ಮಕ್ಕಳಿಗೆ ಆ ಹಂತದಿಂದಲೇ ತಾಂತ್ರಿಕ ಶಿಕ್ಷಣ ನೀಡುವ ಕಾರ್ಯ ಮಾಡಲಾಗುವುದು" ಎಂದಿದ್ದಾರೆ.
"ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿದ್ದು, ಅವರಿಗೆ ಅವಕಾಶ ನೀಡಬೇಕಿದೆ. ಪುಣೆ ಸೇರಿದಂತೆ ಬೆಂಗಳೂರು ಮುಂತಾದ ಕಡೆಗಳಲ್ಲಿ ಆಗಿರಿವ ಐಟಿ, ಬಿಟಿ ಕ್ರಾಂತಿಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ" ಎಂದು ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, "ಪ್ರೌಢಶಾಲೆ ಹಂತದಿಂದಲೇ ಕೋಡಿಂಗ್ ಕಲಿಸಲಾಗುವುದು. ಇದಕ್ಕೆ ಅವಶ್ಯವಿರುವ ಶಿಕ್ಷಕರ ನೇಮಕವನ್ನು ಕೂಡಾ ಮಾಡಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಎ.ಐ. ಹಾಗೂ ಡಾಟಾ ಎಂಜಿನಿಯರಿಂಗ್ಗೆ ಸಂಬಂಧಿಸಿದಂತೆ ಸೆಂಟರ್ ಆಫ್ ಎಕ್ಸ್ಲೆನ್ಸ್ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಸಾಫ್ಟ್ವೇರ್ ಪಾರ್ಕ್ ನಿರ್ಮಾಣಕ್ಕಾಗಿ 50 ಎಕರೆ ಜಮೀನು ಒದಗಿಸಲಾಗುವುದು" ಎಂದಿದ್ದಾರೆ.