ಅಸ್ಸಾಂ, ಅ 05 (DaijiworldNews/MS): ಅಸ್ಸಾಂನ ಕರಿಮಗಂಜ್ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ತೂಗು ಸೇತುವೆ ಕುಸಿದು ಕನಿಷ್ಠ 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸೋಮವಾರ ಕರಿಮಗಂಜ್ ಜಿಲ್ಲೆಯ ರತಬಾರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚೇರಗಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ .
ವರದಿಗಳ ಪ್ರಕಾರ, ಸಿಂಗಲಾ ನದಿಗೆ ತೂಗುವ ಸೇತುವೆ ಚೆರಗಿ ಪ್ರದೇಶವನ್ನು ಹಳ್ಳಿಯೊಂದಿಗೆ ಸಂಪರ್ಕಿಸುವ ಏಕೈಕ ಸೇತುವೆಯಾಗಿದೆ. ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಇತರ ಪ್ರದೇಶಗಳು ಮತ್ತು ಶಾಲೆಗಳನ್ನು ತಲುಪಲು ಈಸೇತುವೆಯನ್ನು ಬಳಸುತ್ತಿದ್ದಾರೆ.
ಸೋಮವಾರ, ಚೇರಗಿ ವಿದ್ಯಾಪೀಠ ಪ್ರೌ ಢಶಾಲೆಯ ವಿದ್ಯಾರ್ಥಿಗಳು ಸಿಂಗ್ಲಾ ನದಿಯನ್ನು ದಾಟಲು ಯತ್ನಿಸಿದಾಗ, ನೇತಾಡುವ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಅನೇಕ ವಿದ್ಯಾರ್ಥಿಗಳು ನದಿಗೆ ಬಿದ್ದಿದ್ದಾರೆ.
ಸ್ಥಳೀಯರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ನದಿಯಿಂದ ರಕ್ಷಿಸಿದ್ದಾರೆ.ಘಟನೆಯಲ್ಲಿ ಕನಿಷ್ಠ 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಸ್ಥರ ಪ್ರಕಾರ, ತೂಗು ಸೇತುವೆಯನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಸೇತುವೆ ಕುಸಿಯಲು ಕಾರಣವೇನು ಎಂಬುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.